ADVERTISEMENT

ಹುಸಿ ಬಾಂಬ್‌ ಬೆದರಿಕೆ: ನಾಗ್ಪುರ ಮೂಲದ ವ್ಯಕ್ತಿ ಮೇಲೆ ಶಂಕೆ

ಪಿಟಿಐ
Published 29 ಅಕ್ಟೋಬರ್ 2024, 16:22 IST
Last Updated 29 ಅಕ್ಟೋಬರ್ 2024, 16:22 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನಾಗ್ಪುರ : ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಕರೆ ಮಾಡಿದ್ದ ಪ್ರಕರಣಗಳ ಹಿಂದೆ, ಮಹಾರಾಷ್ಟ್ರದ ಗೋಂದಿಯಾ ಮೂಲದ 35 ವರ್ಷದ ಜಗದೀಶ್‌ ಉಯಿಕೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಉಯಿಕೆ ಭಯೋತ್ಪಾದನೆ ಕುರಿತ ಪುಸ್ತಕಗಳ ಲೇಖಕ. ಪ್ರಕರಣವೊಂದರಲ್ಲಿ 2021ರಲ್ಲಿ ಈತನನ್ನು ಬಂಧಿಸಲಾಗಿತ್ತು ಎಂದು ಹೇಳಿದರು.

ADVERTISEMENT

ಉಪ ಪೊಲೀಸ್‌ ಆಯುಕ್ತೆ ಶ್ವೇತಾ ಖೇಡ್ಕರ್‌ ಅವರ ನೇತೃತ್ವದ ತನಿಖೆಯಲ್ಲಿ ಬೆದರಿಕೆ ಇ–ಮೇಲ್‌ಗಳ ಹಿಂದೆ ಉಯಿಕೆ ಇರುವುದು ಪತ್ತೆಯಾಗಿದೆ. ಈತ ಪ್ರಧಾನಮಂತ್ರಿಗಳ ಕಾರ್ಯಾಲಯ, ರೈಲ್ವೆ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ವಿಮಾನಯಾನ ಕಚೇರಿಗಳು ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಿಗೆ ಇ–ಮೇಲ್‌ ಕಳುಹಿಸಿದ್ದ ಎಂದು ತಿಳಿಸಿದ್ದಾರೆ.

ಉಯಿಕೆ ಸದ್ಯ ಪರಾರಿಯಾಗಿದ್ದು, ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಳೆದ 13 ದಿನಗಳಿಂದ 300ಕ್ಕೂ ಹೆಚ್ಚು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಬಂದಿದೆ. ಈ ಪೈಕಿ ಬಹುತೇಕ ಬೆದರಿಕೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಂದಿವೆ.

ವಿಮಾನಗಳಿಗೆ ಬಾಂಬ್‌ ಬೆದರಿಕೆ: ಎಫ್‌ಐಆರ್‌ ದಾಖಲು

ಮುಂಬೈ: ಮೂರು ವಿಮಾನಯಾನ ಸಂಸ್ಥೆಗಳ ಸಾಮಾಜಿಕ ಜಾಲತಾಣದ ‘ಎಕ್ಸ್’ ಖಾತೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ಮುಂಬೈ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇಂಡಿಗೊ ಏರ್‌ಲೈನ್ಸ್ ಏರ್ ಇಂಡಿಯಾ ಮತ್ತು ವಿಸ್ತಾರಾ ಸಂಸ್ಥೆಗಳಿಗೆ ಸೋಮವಾರ ಬೆದರಿಕೆ ಸಂದೇಶ ಬಂದಿದ್ದವು. ಪರಿಶೀಲನೆ ನಡೆಸಿದ ನಂತರ ಅವು ಹುಸಿ ಎಂಬುದು ತಿಳಿದುಬಂದಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕಿರುವ ಸಂಬಂಧ ನಗರ ಪೊಲೀಸರು ಈ ತಿಂಗಳಲ್ಲಿ 14 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಛತ್ತೀಸಗಢದ 17 ವರ್ಷದ ವಿದ್ಯಾರ್ಥಿಯನ್ನು ಬಂಧಿಸುವ ಮೂಲಕ ಪೊಲೀಸರು 14 ಪ್ರಕರಣಗಳಲ್ಲಿ ಒಂದು ಪ್ರಕರಣದ ಮೂಲವನ್ನು ಪತ್ತೆಹಚ್ಚಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.