
ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧ, ಸ್ಫೋಟಕ ತಯಾರಿಕಾ ಕಂಪನಿಯ ಒಂಬತ್ತು ಮಂದಿ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ.
‘ಎಸ್‌ಬಿಎಲ್ ಎನರ್ಜಿ ಲಿಮಿಟೆಡ್’ನ 21 ಮಂದಿ ನಿರ್ದೇಶಕರು ಮತ್ತು ಷೇರುದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈವರೆಗೆ ಒಂಬತ್ತು ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಟೋಲ್ ತಾಲ್ಲೂಕಿನ ಗಣಿಗಾರಿಕೆ ಮತ್ತು ಕೈಗಾರಿಕಾ ಸ್ಫೋಟಕ ತಯಾರಿಕಾ ಕಾರ್ಖಾನೆ ‘ಎಸ್‌ಬಿಎಲ್ ಎನರ್ಜಿ ಲಿಮಿಟೆಡ್’ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ 18 ಕಾರ್ಮಿಕರು ಸುಟ್ಟು ಕರಕಲಾಗಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದೆ.
ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ಹಾಗೂ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯ (DISH) ನೀಡಿದ ಪ್ರಾಥಮಿಕ ವರದಿಯಲ್ಲಿ ಸುರಕ್ಷತಾ ದೋಷಗಳು ಪತ್ತೆಯಾಗಿವೆ ಎಂದು ನಾಗ್ಪುರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹರ್ಷ್ ಪೊದ್ದಾರ್ ತಿಳಿಸಿದ್ದಾರೆ.
ಈ ವರದಿಯನ್ನಾಧರಿಸಿ ಪೊಲೀಸರು ಕಂಪನಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತರನ್ನು ವಿಚಾರಣೆಗೆ ಒಳಪಡಿಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಯುತ್ತಿವೆ ಎಂದೂ ಅವರು ಹೇಳಿದ್ದಾರೆ.