ADVERTISEMENT

Nagpur violence: ಎಡಿಟೆಡ್ ವಿಡಿಯೊ ಹಂಚಿ ಹಿಂಸಾಚಾರಕ್ಕೆ ಪ್ರಚೋದನೆ: ಸೈಬರ್ ಸೆಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಮಾರ್ಚ್ 2025, 12:28 IST
Last Updated 20 ಮಾರ್ಚ್ 2025, 12:28 IST
   

ನಾಗ್ಪುರ (ಮಹಾರಾಷ್ಟ್ರ): ನಾಗ್ಪುರ ಹಿಂಸಾಚಾರದ ಆರೋಪಿಗಳಲ್ಲಿ ಒಬ್ಬನು ಸಾಮಾಜಿಕ ಮಾಧ್ಯಮದಲ್ಲಿ ಎಡಿಟ್ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದು, ಹಿಂಸಾಚಾರದ ವಿಡಿಯೊವನ್ನು ವೈಭವೀಕರಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರ ಸೈಬರ್ ಸೆಲ್ ಗುರುವಾರ ತಿಳಿಸಿದೆ. ಇದು ನಗರದ ವಿವಿಧ ಭಾಗಗಳಲ್ಲಿ ಗಲಭೆ ಹರಡಲು ಕಾರಣವಾಯಿತು ಎಂದೂ ಅವರು ಹೇಳಿದ್ದಾರೆ.

‘ಔರಂಗಜೇಬ್ ವಿರುದ್ಧದ ಪ್ರತಿಭಟನೆಯ ವಿಡಿಯೊವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಇದರಿಂದಾಗಿ ಗಲಭೆಗಳು ಹೆಚ್ಚಾಗಿವೆ. ಹಿಂಸಾಚಾರದ ವಿಡಿಯೊಗಳನ್ನು ಸಹ ವೈಭವೀಕರಿಸಿದ್ದಾರೆ ಎಂದು ಸೈಬರ್ ಸೆಲ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಲೋಹಿತ್ ಮತಾನಿ ಎಎನ್‌ಐಗೆ ತಿಳಿಸಿದ್ದಾರೆ.

ಸೋಮವಾರ ರಾತ್ರಿ ನಾಗ್ಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ADVERTISEMENT

‘ಘಟನೆ ಸಂಬಂಧ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಔರಂಗಜೇಬ್ ವಿರುದ್ಧದ ಪ್ರತಿಭಟನೆಯ ವಿಡಿಯೊಗಳನ್ನು ಎಡಿಟ್ ಮಾಡಿ ಪ್ರಸಾರ ಮಾಡಿದ್ದು, ಹಿಂಸಾಚಾರವನ್ನು ವೈಭವೀಕರಿಸಿದ ಸಂಬಂಧ ಮೊದಲ ಎಫ್‌ಐಆರ್ ದಾಖಲಾಗಿದೆ. ಎರಡನೆಯದು ಹಿಂಸಾಚಾರದ ಬಗ್ಗೆ ಕ್ಲಿಪ್‌ಗಳನ್ನು ತಯಾರಿಸಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ ಉಂಟಾಗುವಂತೆ ಅವುಗಳನ್ನು ಹರಡಿದ್ದರ ಸಂಬಂಧ ದಾಖಲಾಗಿದೆ. . ಮೂರನೆಯದು ಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಬಹು ಪೋಸ್ಟ್‌ಗಳನ್ನು ಹಾಕಿದ ಸಂಬಂಧ ದಾಖಲಾಗಿದೆ’ ಎಂದು ಮತಾನಿ ಹೇಳಿದರು.

ಆರೋಪಿ ಫಹೀಮ್ ಖಾನ್‌ನನ್ನು ಮಾರ್ಚ್ 19ರಂದು ಬಂಧಿಸಲಾಯಿತು. ಆತನನ್ನು ಮಾರ್ಚ್ 21ರ ಶುಕ್ರವಾರದವರೆಗೆ ಕಸ್ಟಡಿಯಲ್ಲಿ ಇರಿಸಲಾಗಿದೆ. ಖಾನ್ ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಪಕ್ಷದ (ಎಂಡಿ) ನಾಯಕನಾಗಿದ್ದು, ಗಲಭೆಯ ಕುರಿತು ಪೊಲೀಸರು ಎಫ್‌ಐಆರ್ ದಾಖಲಿಸಿದ ಸ್ವಲ್ಪ ಸಮಯದ ನಂತರ ಆತನನ್ನು ಬಂಧಿಸಲಾಯಿತು.

ಗಲಭೆ ಪೀಡಿತ ಪ್ರದೇಶಗಳು ಸಾಮಾನ್ಯ ಸ್ಥಿತಿಗೆ ಮರಳಿವೆ. ಆದರೆ, ನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ಇನ್ನೂ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಪಿನ್ ಇಟಂಕರ್ ಅವರು ಹೇಳಿದ್ದಾರೆ.

ಸರ್ಕಾರವು ಪ್ರಸ್ತುತ ನಾಗರಿಕ ಆಸ್ತಿಪಾಸ್ತಿಗೆ ಆಗಿರುವ ಹಾನಿಯನ್ನು ಪರಿಶೀಲಿಸುತ್ತಿದೆ. ಸಂತ್ರಸ್ತರಿಗೆ ಪರಿಹಾರವನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಆರಂಭಿಕ ಅಂದಾಜಿನ ಪ್ರಕಾರ, 50-60 ದ್ವಿಚಕ್ರ ವಾಹನಗಳು, 10-15 ನಾಲ್ಕು ಚಕ್ರದ ವಾಹನಗಳು, ಕ್ರೇನ್‌ಗಳು ಮತ್ತು ಸುಮಾರು 5-10 ಮನೆಗಳು ಹಾನಿಗೊಳಗಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.