ನಾಗ್ಪುರ ಹಿಂಸಾಚಾರ ( ಸಂಗ್ರಹ ಚಿತ್ರ)
ನಾಗ್ಪುರ: ನಾಗ್ಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 17 ಮಂದಿ ಆರೋಪಿಗಳನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಮಾರ್ಚ್ 22ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಿದೆ.
ಗುರುವಾರ ತಡರಾತ್ರಿ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮೈಮುನಾ ಸುಲ್ತಾನ ಅವರ ಮುಂದೆ ಹಾಜರುಪಡಿಸಿದ ಪೊಲೀಸರು, ಏಳು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದರು.
ಗಣೇಶಪೇಟೆ ಠಾಣಾ ವ್ಯಾಪ್ತಿಯಲ್ಲಿ ಬಂಧಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
'ಆರೋಪಿಗಳ ವಿರುದ್ಧ ಹೊರಿಸಲಾದ ಅಪರಾಧಗಳು 'ಗಂಭೀರ ಸ್ವರೂಪದ್ದಾಗಿವೆ'. ಹೀಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿ, ವಿಚಾರಣೆ ನಡೆಸಬೇಕೆಂದು' ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
'ಹಿಂಸಾಚಾರದಲ್ಲಿ ಗುಂಪೊಂದು ಭಾಗಿಯಾಗಿರುವುದರಿಂದ ಅಪರಾಧಿಗಳ ಪತ್ತೆಗೆ ಪೊಲೀಸರಿಗೂ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪರಾಧಿಗಳ ಪತ್ತೆಗೆ ಪ್ರತಿಯೊಬ್ಬ ಆರೋಪಿಯನ್ನೂ ವಿಚಾರಣೆ ಮಾಡುವುದು ಅಗತ್ಯವಾಗಿದೆ' ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕೋರಿ ವಿಎಚ್‌ಪಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ 'ಚಾದರ್' ಸುಟ್ಟು ಹಾಕಲಾಗಿದೆ ಎಂಬ ವದಂತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.