ಕೊರಬಾ: ಐಸ್‌ಕ್ರೀಮ್ ಕಾರ್ಖಾನೆಯಲ್ಲಿ ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇರೆಗೆ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ಶಾಕ್ ನೀಡಲಾಗಿದೆ. ಅಲ್ಲದೆ ಬೆರಳಿನ ಉಗುರುಗಳನ್ನು ಕಿತ್ತು, ಚಿತ್ರಹಿಂಸೆ ನೀಡಲಾಗಿದೆ.
ಛತ್ತೀಸಗಢದ ಕೊರಬಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ಚಿತ್ರಹಿಂಸೆಗೆ ಒಳಗಾದ ಇಬ್ಬರು ಕಾರ್ಮಿಕರು ತಪ್ಪಿಸಿಕೊಂಡು ಹುಟ್ಟೂರು ಭಿಲ್ವಾರಕ್ಕೆ ಹೋಗಿ, ಗುಲಾಬ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ‘ಶೂನ್ಯ’ ಎಫ್ಐಆರ್ (ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯದ ಘಟನೆಯ ಕುರಿತು ಎಫ್ಐಆರ್ ದಾಖಲಿಸಿಕೊಳ್ಳುವುದು) ದಾಖಲಿಸಿಕೊಂಡ ರಾಜಸ್ಥಾನ ಪೊಲೀಸರು, ಪ್ರಕರಣವನ್ನು ಕೊರಬಾ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಅಭಿಷೇಕ್ ಭಾಂಬಿ ಮತ್ತು ವಿನೋದ್ ಭಾಂಬಿ ಅವರು ಛತ್ತೀಸಗಢದ ಖಾಪ್ರಭಟ್ಟಿ ಎಂಬಲ್ಲಿರುವ ಐಸ್‌ಕ್ರೀಮ್ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 14ರಂದು ಈ ಇಬ್ಬರೂ ಕಾರ್ಮಿಕರು ತಮ್ಮ ಕಾರ್ಖಾನೆಯಲ್ಲಿ ಕಳವು ಮಾಡಿದ್ದಾರೆ ಎಂದು ಕಾರ್ಖಾನೆ ಮಾಲೀಕ ಛೋಟು ಗುರ್ಜರ್ ಮತ್ತು ಆತನ ಸಹವರ್ತಿ ಮುಕೇಶ್ ಶರ್ಮಾ ಆರೋಪಿಸಿದ್ದರು. ಹೀಗಾಗಿ, ಇಬ್ಬರು ಕಾರ್ಮಿಕರ ಬಟ್ಟೆಗಳನ್ನು ಬಿಚ್ಚಿಸಿ, ಚಿತ್ರಹಿಂಸೆ ನೀಡಲಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಭಿಷೇಕ್ ಭಾಂಬಿ, ‘ವಾಹನದ ಇಎಂಐ ಪಾವತಿಸಲು ಮಾಲೀಕರ ಬಳಿ ₹20,000 ಮುಂಗಡ ಹಣ ಕೇಳಿದ್ದೆ. ಅವರು ನಿರಾಕರಿಸಿದ ಕಾರಣ ಕೆಲಸ ಬಿಡಲು ಮುಂದಾಗಿದ್ದೆ. ಇದರಿಂದ ಆಕ್ರೋಶಗೊಂಡಿದ್ದ ಮಾಲೀಕರು ಈ ಈ ಕೃತ್ಯ ಎಸಗಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.