ADVERTISEMENT

R Nallakannu: ಕಮ್ಯುನಿಸ್ಟ್‌ ನಾಯಕ ನಲ್ಲಕಣ್ಣ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 16:15 IST
Last Updated 25 ಫೆಬ್ರುವರಿ 2026, 16:15 IST
   

ಚೆನ್ನೈ: ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್‌ ಚಳವಳಿಯ ನೇತಾರ, ಜನನಾಯಕ, ಶತಾಯುಷಿ ಆರ್‌. ನಲ್ಲಕಣ್ಣ್‌ (101) ಬುಧವಾರ ಮಧ್ಯಾಹ್ನ ನಿಧನರಾದರು.

ಸರಳತೆಯ ಪ್ರತೀಕವಾಗಿದ್ದ ಅವರು, ಎಂಟು ದಶಕಗಳಿಗೂ ಹೆಚ್ಚು ಕಾಲ ಜನಪರ ಹೋರಾಟದಲ್ಲಿ ಸಕ್ರಿಯರಾಗಿದ್ದರು.

ಆರ್‌ಎನ್‌ಕೆ ಎಂದೇ ಕರೆಯಲಾಗುತ್ತಿದ್ದ ನಲ್ಲಕಣ್ಣ್ ಅವರು ತಮಗೆ ಸಂದ ಪ್ರಶಸ್ತಿಗಳ ಜತೆ ನೀಡಿದ್ದ ಹಣವನ್ನು ಸಿಪಿಐಗೆ ಹಾಗೂ ರೈತ ಸಂಘಟನೆಗಳಿಗೆ ನೀಡಿದ್ದರು.

ADVERTISEMENT

ನಲ್ಲಕಣ್ಣ್ ಅವರಿಗೆ 80 ವರ್ಷ ತುಂಬಿದಾಗ, ಸಿಪಿಐ ₹1 ಕೋಟಿ ದೇಣಿಗೆ ಸಂಗ್ರಹಿಸಿ ನೀಡಿತು. ಆ ಹಣವನ್ನು ಪಕ್ಷಕ್ಕೆ ವಾಪಸ್ ನೀಡಿದ್ದರು. ಡಿಎಂಕೆ ನೇತೃತ್ವದ ಸರ್ಕಾರವು 2022ರಲ್ಲಿ ನೀಡಿದ್ದ ತಗೈಸಲ್‌ ತಮಿಳರ್ ಪ್ರಶಸ್ತಿ ಜೊತೆಗಿನ ₹10 ಲಕ್ಷ ನಗದನ್ನು ಸಹ ಮರಳಿಸಿದ್ದರು.

ನಲ್ಲಕಣ್ಣ್‌ ಅವರ ಆಶಯದಂತೆ ರಾಜೀವ್‌ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಗುರುವಾರ ದೇಹದಾನ ಮಾಡಲಾಗುವುದು.

ತೂತುಕುಡಿ ಜಿಲ್ಲೆಯ ಶ್ರೀವೈಕುಂಡಂನಲ್ಲಿ 1925ರಲ್ಲಿ ಜನಿಸಿದ್ದ ನಲ್ಲಕಣ್ಣ್‌, ವಿದ್ಯಾರ್ಥಿ ಇದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ತಮ್ಮ 18ನೇ ವಯಸ್ಸಿನಲ್ಲೇ ಸಿಪಿಐಗೆ ಸೇರಿದ್ದರು. 1964ರ ಚೀನಾ ಯುದ್ಧದ ನಂತರ ದೇಶದಲ್ಲಿ ಕಮ್ಯುನಿಸ್ಟ್‌ ಚಳವಳಿ ವಿಭಜನೆ ಆದಾಗಲೂ ಸಿಪಿಐನೊಂದಿಗೆ ಉಳಿದಿದ್ದರು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಕಮ್ಯುನಿಸ್ಟ್ ಪಕ್ಷಗಳ ಮೇಲಿನ ನಿಷೇಧದ ನಂತರ, ಆಗಿನ ಜವಾಹರಲಾಲ್ ನೆಹರೂ ಸರ್ಕಾರವನ್ನು ಉರುಳಿಸಲು ಆಪ್ತರೊಂದಿಗೆ ಸಂಚು ರೂಪಿಸಿದ ಆರೋಪದ ಮೇಲೆ 1949ರಲ್ಲಿ ಬಂಧನಕ್ಕೊಳಗಾದ ನಲ್ಲಕಣ್ಣ್‌ ಅವರು ಏಳು ವರ್ಷ ಸೆರೆವಾಸ ಅನುಭವಿಸಿದ್ದರು. ಜೈಲು ಅಧಿಕಾರಿಗಳಿಂದ ಚಿತ್ರಹಿಂಸೆಯನ್ನು ಅನುಭವಿಸಿದ್ದಾಗಿಯೂ ಹೇಳಿಕೊಂಡಿದ್ದರು.

ದ್ರಾವಿಡ ಚಳವಳಿ ನಾಯಕರೊಂದಿಗೆ, ಅದರಲ್ಲೂ ವಿಶೇಷವಾಗಿ ಎಂ. ಕರುಣಾನಿಧಿ ಜೊತೆ ನಂಟು ಹೊಂದಿದ್ದ ನಲ್ಲಕಣ್ಣ್‌ ಅವರು 1999ರ ಲೋಕಸಭಾ ಚುನಾವಣೆಗೆ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಸ್ಪರ್ಧಿಸಿದ್ದು ಇದೊಂದೇ ಚುನಾವಣೆ. ಈ ಚುನಾವಣೆಯಲ್ಲಿ ಈಗಿನ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಎದುರು ಪರಾಭವಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.