ADVERTISEMENT

ಉತ್ತರ ಪ್ರದೇಶ: ಬಿಸಿಯೂಟಕ್ಕೆ ರೊಟ್ಟಿ–ಉಪ್ಪು; ಇಬ್ಬರು ಶಿಕ್ಷಕರ ಅಮಾನತು

ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ. ಪ್ರಿಯಾಂಕ ಗಾಂಧಿ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 19:31 IST
Last Updated 23 ಆಗಸ್ಟ್ 2019, 19:31 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಮಿರ್ಜಾಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಜಮಲ್‌ಪುರದ ಸಿಯುರ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ರೊಟ್ಟಿ ಮತ್ತು ಉಪ್ಪು ನೀಡಲಾಗಿದ್ದು, ಘಟನೆ ಸಂಬಂಧ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.

ಮಕ್ಕಳಿಗೆ ರೊಟ್ಟಿ–ಉಪ್ಪು ಬಡಿಸುತ್ತಿರುವ ದೃಶ್ಯ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಘಟನೆಯ ವಿಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ, ‘ಮಿರ್ಜಾಪುರದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ರೊಟ್ಟಿ ಮತ್ತು ಉಪ್ಪು ನೀಡಲಾಗುತ್ತಿದೆ. ಇದು ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರದ ಸ್ಥಿತಿ. ಸರ್ಕಾರ ಶಾಲಾ ಮಕ್ಕಳಿಗೆ ಒದಗಿಸುತ್ತಿರುವ ಕಳಪೆ ಗುಣಮಟ್ಟದ ಸೌಲಭ್ಯ ಇದಾಗಿದ್ದು, ಖಂಡನೀಯ’ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಘಟನೆಯ ಕುರಿತು ಬ್ಲಾಕ್ ಮಟ್ಟದ ಶಿಕ್ಷಣಾಧಿಕಾರಿಯಿಂದ ವರದಿ ತರಿಸಿಕೊಳ್ಳಲಾಗಿದ್ದು, ಮೇಲ್ನೋಟಕ್ಕೆ ಬೇಜವಾಬ್ದಾರಿ ಸಾಬೀತಾಗಿರುವ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ’ ಎಂದು ಶಿಕ್ಷಣಾಧಿಕಾರಿ ಪ್ರವೀಣ್‌ ಕುಮಾರ್ ತಿವಾರಿ ಶುಕ್ರವಾರ ತಿಳಿಸಿದ್ದಾರೆ.

ನಿಗದಿತ ಮೆನುವಿನ ಪ್ರಕಾರ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿದ್ದು, ರೊಟ್ಟಿ ಮತ್ತು ಉಪ್ಪು ನೀಡಲು ನಿರ್ದೇಶಿಸಲಾಗಿತ್ತೇ ಎನ್ನುವ ಕುರಿತು ಅರಿಯಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪೌಷ್ಟಿಕಾಂಶದ ಮಾನದಂಡಗಳ ಪ್ರಕಾರ, ಶಾಲಾ ಮಕ್ಕಳಿಗೆ ದ್ವಿದಳ ಧಾನ್ಯಗಳು, ಅಕ್ಕಿ, ರೊಟ್ಟಿ, ತರಕಾರಿಗಳ ಜೊತೆಗೆ ಹಣ್ಣು ಮತ್ತು ಹಾಲನ್ನು ನೀಡಬೇಕು.ಯೋಜನೆಯಡಿ ಪ್ರತಿ ಮಗುವಿಗೆ ದಿನಕ್ಕೆ ಕನಿಷ್ಠ 450 ಕ್ಯಾಲೊರಿಯಷ್ಟು ಹೊಂದಿರುವ ಆಹಾರ ನೀಡಬೇಕು. ಇದರಲ್ಲಿ ಕನಿಷ್ಠ 12 ಗ್ರಾಂ ಪ್ರೋಟಿನ್ ಅಂಶ ಇರಬೇಕು. ಮಧ್ಯಾಹ್ನದ ಬಿಸಿಯೂಟವನ್ನು ಮಗುವಿಗೆ ವರ್ಷದಲ್ಲಿ ಕನಿಷ್ಠ 200 ದಿನಗಳ ಮಟ್ಟಿಗೆ ನೀಡಬೇಕು ಎಂಬ ನಿಯಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.