ADVERTISEMENT

ಆಧಾರ್‌ ಜೋಡಣೆ ಮಾಡದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ: ಕೇಂದ್ರ

ಪಿಟಿಐ
Published 16 ಡಿಸೆಂಬರ್ 2022, 12:55 IST
Last Updated 16 ಡಿಸೆಂಬರ್ 2022, 12:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮತದಾರರ ಗುರುತಿನ ಚೀಟಿ ಜೊತೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದು ಸ್ವ–ಇಚ್ಛೆಯಿಂದ ನಡೆಯುವ ಪ್ರಕ್ರಿಯೆ ಎಂದೂ ಹೇಳಿದೆ.

ಮತದಾರರ ಗುರುತಿಗಾಗಿ ಅವರಿಂದ (ಸ್ವ–ಇಚ್ಛೆಯ ನೆಲೆಯಲ್ಲಿ) ಆಧಾರ್‌ ಸಂಖ್ಯೆ ಪಡೆಯಲು 2021ರ ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯ್ದೆಯು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ಲೋಕಸಭೆಯಲ್ಲಿ ತಿಳಿಸಿದ್ದಾರೆ.

‘ಇತ್ತೀಚೆಗೆ ಪರಿಚಯಿಸಲಾದ ನಮೂನೆ 6ಬಿ ಯಲ್ಲಿ ಆಧಾರ್‌ ದೃಢೀಕರಣಕ್ಕಾಗಿ ಮತದಾರರಿಂದ ಒಪ್ಪಿಗೆ ಪಡೆಯಲಾಗುತ್ತಿದೆ’ ಎಂದಿದ್ದಾರೆ.

ADVERTISEMENT

‘ಆಧಾರ್‌ ಮಾಹಿತಿಯನ್ನು ಹಂಚಿಕೊಳ್ಳಲು ನೀಡಿರುವ ಸಮ್ಮತಿಯನ್ನು ಹಿಂಪಡೆಯಲು ಅವಕಾಶ ಇಲ್ಲ’ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ.

95 ಕೋಟಿ ಮತದಾರರ ಪೈಕಿ 54 ಕೋಟಿಗಿಂತಲೂ ಅಧಿಕ ಮತದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಲು ಒಪ್ಪಿದ್ದಾರೆ ಎಂದೂ ವಿವರಿಸಿದ್ದಾರೆ.

ಚುನಾವಣಾ ಆಯೋಗವು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಡಿಎಐ) ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಅದು ಮತದಾರರ ಆಧಾರ್‌ ಸಂಖ್ಯೆಯನ್ನು ತನ್ನ ಡೇಟಾಬೇಸ್‌ನಲ್ಲಿ ಸಂಗ್ರಹಿಸಿಡುವುದಿಲ್ಲ. ಕೇವಲ ದೃಢೀಕರಣಕ್ಕಾಗಿ ಮಾತ್ರ ಆಧಾರ್‌ ಸಂಖ್ಯೆಯನ್ನು ಬಳಸಲಾಗುತ್ತಿದೆ ಎಂಬುದನ್ನು ಸಚಿವರು ಒತ್ತಿ ಹೇಳಿದ್ದಾರೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರಿಂದ ಸ್ವ–ಇಚ್ಛೆಯ ನೆಲೆಯಲ್ಲಿ ಆಧಾರ್‌ ಸಂಖ್ಯೆ ಸಂಗ್ರಹಿಸುವ ಅಭಿಯಾನವನ್ನು ಚುನಾವಾಣಾ ಆಯೋಗವು ಆಗಸ್ಟ್‌ 1ರಿಂದ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.