ADVERTISEMENT

ದಲ್ಲಾಳಿ, ಮಧ್ಯವರ್ತಿಗಳ ಬೆಂಬಲ ಪಡೆದವರಿಂದ ಕೃಷಿ ಮಸೂದೆಗೆ ವಿರೋಧ: ನರೇಂದ್ರ ಮೋದಿ

ಪಿಟಿಐ
Published 11 ಅಕ್ಟೋಬರ್ 2020, 9:35 IST
Last Updated 11 ಅಕ್ಟೋಬರ್ 2020, 9:35 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೃಷಿ ಮಸೂದೆಯನ್ನು ವಿರೋಧಿಸುತ್ತಿರುವ ವಿರೋಧಪಕ್ಷಗಳ ವಿರುದ್ಧಹರಿಹಾಯ್ದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶ ಸುಧಾರಣಾ ಕ್ರಮಗಳಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಬೆಂಬಲದಿಂದಲೇ ರಾಜಕಾರಣ ಮಾಡುತ್ತಿರುವವರು ಮಾತ್ರವೇ ಈ ಕೃಷಿ ಮಸೂದೆಗಳ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

‘ಸ್ವಾಮಿತ್ವ’ ಯೋಜನೆಯಡಿ ಆಸ್ತಿ ಹಕ್ಕು ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, 'ಈ ಸರ್ಕಾರ ತಂದಿರುವ ಸುಧಾರಣಾ ಕ್ರಮಗಳನ್ನು ವಿರೋಧಿಸುತ್ತಿರುವವರನ್ನು ಕೃಷಿಕರು ಬೆಂಬಲಿಸುವುದಿಲ್ಲ' ಎಂದು ಹೇಳಿದರು.

ADVERTISEMENT

ಕಳೆದ ಆರು ವರ್ಷಗಳಲ್ಲಿ ತಮ್ಮ ಸರ್ಕಾರ ಗ್ರಾಮಗಳು, ಗ್ರಾಮೀಣ ಜನರಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಹಿಂದಿನ ಆರು ದಶಕಗಳಲ್ಲಿ ಇಷ್ಟು ಕೆಲಸ ಆಗಿರಲಿಲ್ಲ ಎಂದು ಸಮರ್ಥಿಸಿಕೊಂಡ ಅವರು, ಇದಕ್ಕೆ ಸಮರ್ಥನೆಯಾಗಿ ಬ್ಯಾಂಕ್ ಖಾತೆಗಳನ್ನು ತೆರೆದಿರುವುದು, ಶೌಚಾಲಯಗಳು ಮತ್ತು ಮನೆಗಳ ನಿರ್ಮಾಣ, ಅಡುಗೆ ಅನಿಲ ಯೋಜನೆ ಮತ್ತು ಗ್ರಾಮೀಣ ವಿದ್ಯುದ್ದೀಕರಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು.

ಈ ಮೊದಲು ದೇಶದಲ್ಲಿ ಆಡಳಿತ ನಡೆಸಿದವರು ಗ್ರಾಮೀಣ ಭಾರತವನ್ನು ಮರೆತಿದ್ದರು ಎಂದು ಅವರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಹೆಚ್ಚಿನ ಜನರಿಗೆ ಗ್ರಾಮಗಳು, ಬಡವರು, ಕೃಷಿಕರು, ಕಾರ್ಮಿಕರು ಆತ್ಮನಿರ್ಭರರಾಗುವುದು ಬೇಕಾಗಿಲ್ಲ. ನಮ್ಮ ಸರ್ಕಾರ ಅವರನ್ನು ಸಬಲೀಕರಣಗೊಳಿಸಲು ಮುಂದಾಗಿದೆ. ಈ ಕ್ರಮಗಳು ಕೆಲವರ ಆದಾಯದ ಮೂಲಕ್ಕೆ ಹೊಡೆತ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.