ADVERTISEMENT

ದೀರ್ಘಾವಧಿಯ ಪ್ರಧಾನಿ; ಇಂದಿರಾ ಗಾಂಧಿ ದಾಖಲೆ ಮುರಿದ ನರೇಂದ್ರ ಮೋದಿ

ಪಿಟಿಐ
Published 25 ಜುಲೈ 2025, 4:19 IST
Last Updated 25 ಜುಲೈ 2025, 4:19 IST
<div class="paragraphs"><p>ಇಂದಿರಾ ಗಾಂಧಿ, ನರೇಂದ್ರ ಮೋದಿ</p></div>

ಇಂದಿರಾ ಗಾಂಧಿ, ನರೇಂದ್ರ ಮೋದಿ

   

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ದಾಖಲೆ ಮುರಿದಿರುವ ನರೇಂದ್ರ ಮೋದಿ, ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಭಾರತದ ಎರಡನೇ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದಿಗೆ (ಶುಕ್ರವಾರ) ಪ್ರಧಾನಿಯಾಗಿ 4,078 ದಿನಗಳನ್ನು ಪೂರ್ಣಗೊಳಿಸಿದ್ದಾರೆ.

ADVERTISEMENT

ಈ ಹಿಂದೆ 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, 4,077 ದಿನಗಳ ಕಾಲ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

ಅಂದ ಹಾಗೆ ದೇಶದ ದೀರ್ಘಾವಧಿಯ ಪ್ರಧಾನಿ ಎಂಬ ದಾಖಲೆ, ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದೆ. 1947ರ ಆಗಸ್ಟ್ 15ರಿಂದ 1964ರ ಮೇ 27ರ ವರೆಗೆ 16 ವರ್ಷ 286 ದಿನಗಳ ಕಾಲ ಜವಾಹರಲಾಲ್ ನೆಹರೂ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸತತ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಈಗಾಗಲೇ ನೆಹರೂ ದಾಖಲೆಯನ್ನು ಮೋದಿ ಸರಿಗಟ್ಟಿದ್ದರು.

2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಮೋದಿ, 2014ರಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು.

ಸ್ವಾತಂತ್ರ್ಯ ನಂತರ ಜನಿಸಿದ ಮೊದಲ ಪ್ರಧಾನಿ ಎನಿಸಿರುವ ಮೋದಿ, ಅತಿ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ ಕಾಂಗ್ರೆಸ್ಸೇತರ ಪ್ರಧಾನಿಯೂ ಆಗಿದ್ದಾರೆ. ಎರಡು ಸಲ ಅವಧಿ ಪೂರ್ಣಗೊಳಿಸಿದ ಏಕಮಾತ್ರ ಕಾಂಗ್ರೆಸ್ಸೇತರ ನಾಯಕ ಕೂಡಾ ಹೌದು.

ದೇಶದ ಎಲ್ಲ ಪ್ರಧಾನಿ ಹಾಗೂ ಸಿಎಂಗಳ ಪೈಕಿ ಸತತ ಆರು ಬಾರಿ ಚುನಾವಣೆಗಳಲ್ಲಿ ಗೆಲುವು ದಾಖಲಿಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಯೂ ಮೋದಿಗೆ ಸಲ್ಲುತ್ತದೆ. 2002, 2007 ಹಾಗೂ 2012ರ ಗುಜರಾತ್ ವಿಧಾನಸಭಾ ಚುನಾವಣೆ ಮತ್ತು 2014, 2019 ಹಾಗೂ 2014ರ ಲೋಕಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.