ADVERTISEMENT

ವಿರೋಧ ಪಕ್ಷಗಳಿಗೆ ದೇಶದ ಭವಿಷ್ಯ ಉತ್ತಮಪಡಿಸುವ ದೃಷ್ಟಿಕೋನವಿಲ್ಲ: ಮೋದಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 11:31 IST
Last Updated 13 ಏಪ್ರಿಲ್ 2019, 11:31 IST
   

ರಾಮನಾಥಪುರಂ: ತಮಿಳುನಾಡಿನಲ್ಲಿ ಕಾಂಗ್ರೆಸ್‌–ಡಿಎಂಕೆ ಪಕ್ಷಗಳ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಭವಿಷ್ಯವನ್ನು ಉತ್ತಮಪಡಿಸುವ ಯೋಜನೆಗಳನ್ನು ರೂಪಿಸುವ ಬಗ್ಗೆವಿರೋಧ ಪಕ್ಷಗಳುಯಾವುದೇ ವಿಷನ್‌(ದೃಷ್ಟಿಕೋನ)ಹೊಂದಿಲ್ಲ ಎಂದು ಹರಿಹಾಯ್ದಿದ್ದಾರೆ.

ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ದೇಶದ ಅಭಿವೃದ್ಧಿ ಕುರಿತು ಮಾತನಾಡುತ್ತಿದ್ದರೆ, ವಿರೋಧ ಪಕ್ಷಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. ‘ಅವರು(ವಿರೋಧ ಪಕ್ಷಗಳು) ಹಗಲು ರಾತ್ರಿ ಅವರು ಹೇಳುವುದು ಒಂದೇ ಮಾತು ಅದು, ಮೋದಿಯನ್ನು ಕೆಳಗಿಳಿಸಿ, ಮೋದಿಯನ್ನು ಕೆಳಗಿಳಿಸಿ, ಮೋದಿಯನ್ನು ಕೆಳಗಿಳಿಸಿ. ಅವರು ಮೋದಿಯನ್ನು ವಿರೋಧಿಸುವುದಕ್ಕಷ್ಟೇ ಅಂಟಿಕೊಂಡಿದ್ದಾರೆ’ ಎಂದು ಕುಟುಕಿದರು.

ಪುಲ್ವಾಮಾ ದಾಳಿ ಹಾಗೂ ಪಾಕಿಸ್ತಾನದಬಾಲಾಕೋಟ್‌ನಲ್ಲಿರುವ ಜೈಷ್‌ ಎ–ಮೊಹಮ್ಮದ್‌ ಉಗ್ರರ ನೆಲೆಗಳ ಮೇಲೆ ವಾಯುಪಡೆ ನಡೆಸಿದ ದಾಳಿ ಕುರಿತು ಪ್ರಸ್ತಾಪಿಸಿದ ಮೋದಿ, ‘ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿದ್ದಾಗ ಉಗ್ರರು ನಿರಂತರವಾಗಿ ದೇಶದ ಮೇಲೆ ದಾಳಿ ನಡೆಸುತ್ತಿದ್ದರು. ಆದರೂ ಕಾಂಗ್ರೆಸ್‌ ಅಸಹಾಯಕವಾಗಿ ಸುಮ್ಮನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಭಾರತವು ಒಬ್ಬನೇಒಬ್ಬ ಉಗ್ರ ಅಥವಾ ಜಿಹಾದಿಯನ್ನೂ ಬಿಡುವುದಿಲ್ಲ. ಒಂದು ವೇಳೆ ಅವರು ನಮ್ಮನ್ನು ಗುರಿಯಾಗಿರಿಸಿದರೆ, ಅವರು ಎಲ್ಲಿಯೇ ಇದ್ದರು ಹುಡುಕಿ ಅವರು ಸಂತಸವನ್ನೇ ನಾಶಮಾಡುತ್ತೇವೆ’ ಎಂದು ಗುಡುಗಿದ್ದಾರೆ.

ADVERTISEMENT

ಶಬರಿಮಲೆ ವಿಚಾರವಾಗಿಯೂ ಕಿಡಿಕಾರಿದ ಪ್ರಧಾನಿ, ‘ಶಬರಿಮಲೆ ದೇಗುಲ ವಿಚಾರದಲ್ಲಿ ಕಾಂಗ್ರೆಸ್‌, ಡಿಎಂಕೆ ಹಾಗೂ ಮುಸ್ಲಿಂ ಲೀಗ್‌ನವರು ಅಪಾಯಕಾರಿ ಆಟವಾಡುತ್ತಿದ್ದಾರೆ. ನಂಬಿಕೆ ಹಾಗೂ ಆಚರಣೆಗಳ ಮೇಲೆ ವಿವೇಚನಾರಹಿತವಾಗಿ ದಾಳಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಇರುವವರೆಗೂ ನಮ್ಮ ನಂಬಿಕೆ ಹಾಗೂ ಸಂಸ್ಕೃತಿಯನ್ನು ನಾಶಮಾಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಎಲ್ಲರೂ ಬಿಜೆಪಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ ಅವರು, ‘ಕಾಂಗ್ರೆಸ್‌, ಡಿಎಂಕೆ ಹಾಗೂ ಮುಸ್ಲಿಂ ಲೀಗ್‌ಗೆ ಮತ ನೀಡುವುದು ಅಧಿಕ ತೆರಿಗೆ ಹಾಗೂ ಕಡಿಮೆ ಅಭಿವೃದ್ಧಿಯನ್ನು ಬೆಂಬಲಿಸಿದಂತೆ. ಅವರಿಗೆ ನೀಡುವ ಒಂದೊಂದು ಮತವೂ ಉಗ್ರರಿಗೆ ಸ್ವತಂತ್ರ ನೀಡುತ್ತವೆ. ಅವರಿಗೆ ನೀಡುವ ಒಂದೊಂದು ಮತವೂ ರಾಜಕಾರಣದಲ್ಲಿ ಕ್ರಿಮಿನಲ್‌(ಅಪರಾಧ) ಪ್ರಕರಣಗಳನ್ನು ಹೆಚ್ಚಿಸುತ್ತವೆ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.