ADVERTISEMENT

ಮೋದಿ ಪದವಿ ವ್ಯಾಸಂಗ ವಿವರ ಕೇಳಿದ್ದ ಪ್ರಕರಣ:ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಪಿಟಿಐ
Published 25 ಆಗಸ್ಟ್ 2025, 11:06 IST
Last Updated 25 ಆಗಸ್ಟ್ 2025, 11:06 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವ್ಯಾಸಂಗಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಹೊರಡಿಸಿದ್ದ ಆದೇಶವನ್ನು ದೆಹಲಿ ಹೈಕೋರ್ಟ್‌ ಸೋಮವಾರ ರದ್ದುಪಡಿಸಿದೆ.

‘ಇದು ವೈಯಕ್ತಿಕ ಮಾಹಿತಿ. ಈ ವಿವರ ಕೋರಿರುವುದರ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ’ ಎಂದು ನ್ಯಾಯಮೂರ್ತಿ ಸಚಿನ್‌ ದತ್ತ ಹೇಳಿದ್ದಾರೆ.

ಈ ವಿಚಾರ ಕುರಿತ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ದತ್ತ, ಫೆಬ್ರುವರಿ 27ರಂದು ತೀರ್ಪು ಕಾಯ್ದಿರಿಸಿದ್ದರು.

ADVERTISEMENT

ಪ್ರಧಾನಿ ಮೋದಿ ಅವರು 1978ರಲ್ಲಿ ಬಿ.ಎ ತೇರ್ಗಡೆಯಾಗಿದ್ದಾರೆ. ಅವರ ಪದವಿ ವ್ಯಾಸಂಗಕ್ಕೆ ಸಂಬಂಧಿಸಿದ ವಿವರಗಳನ್ನು ಒದಗಿಸುವಂತೆ ನೀರಜ್‌ ಎಂಬುವವರು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. 1978ರಲ್ಲಿ ಬಿ.ಎ ತೇರ್ಗಡೆಯಾದವರ ದಾಖಲೆಗಳನ್ನು ಪರಿಶೀಲಿಸಲು ಅನುಮತಿ ನೀಡಿ, ಸಿಐಸಿ 2016ರ ಡಿಸೆಂಬರ್ 21ರಂದು ಆದೇಶಿಸಿತ್ತು. 

ಇದನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, ಸಿಐಸಿ ಆದೇಶಕ್ಕೆ ತಡೆ ನೀಡಿ 2017ರ ಜನವರಿ 23ರಂದು ಆದೇಶಿಸಿತ್ತು. 

ಹೈಕೋರ್ಟ್‌ ಹೇಳಿದ್ದೇನು?:

* ಸಾರ್ವಜನಿಕ ಹುದ್ದೆಯೇರಲು ಅಥವಾ ಅಧಿಕಾರದಲ್ಲಿದ್ದುಕೊಂಡು ಕರ್ತವ್ಯ ನಿಭಾಯಿಸುವುದಕ್ಕೆ ಶೈಕ್ಷಣಿಕ ಅರ್ಹತೆಗಳೂ ಶಾಸನಬದ್ಧ ಅಗತ್ಯವೇನಲ್ಲ

* ‘ಸಾರ್ವಜನಿಕರಿಗೆ ಆಸಕ್ತಿದಾಯಕ’ ಎನಿಸಿದ ಸಂಗತಿಗೂ ‘ಸಾರ್ವಜನಿಕ ಹಿತಾಸಕ್ತಿ ಒಳಗೊಂಡ ವಿಷಯ’ಕ್ಕೂ ವ್ಯತ್ಯಾಸ ಇದೆ

* ಸರ್ಕಾರದ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಿದ್ದರೂ ಕೂಡ ಖಾಸಗಿತನ/ಗೋಪ್ಯತೆ ಕಾಪಾಡುವ ಹಕ್ಕುಗಳಿಗಿಂತ ಅವರ ವೈಯಕ್ತಿಕ ಮಾಹಿತಿ ಒದಗಿಸುವುದು ಮಹತ್ವದ್ದೆನಿಸುವುದಿಲ್ಲ. ಅಲ್ಲದೇ ಕೇಳಿರುವ ಮಾಹಿತಿ ಅವರ ಕರ್ತವ್ಯ ನಿರ್ವಹಣೆಗೆ ಯಾವುದೇ ರೀತಿ ಸಂಬಂಧ ಹೊಂದಿಲ್ಲ

* ಸರ್ಕಾರದ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಉತ್ತೇಜಿಸುವುದು ಆರ್‌ಟಿಐ ಕಾಯ್ದೆಯ ಉದ್ದೇಶವಾಗಿದೆಯೇ ಹೊರತು ಯಾವುದೇ ಒಂದು ವಿಚಾರವನ್ನು ಸಂವೇದನಾಶೀಲಗೊಳಿಸುವುದಲ್ಲ

* ಪಡೆದ ಅಂಕಗಳು ಶ್ರೇಣಿ ಉತ್ತರ ಪತ್ರಿಕೆಗಳು... ವೈಯಕ್ತಿಕ ಮಾಹಿತಿ ಆಗಿದ್ದು ಈ ವಿವರಗಳನ್ನು ಬಹಿರಂಗಪಡಿಸದಂತೆ ಆರ್‌ಟಿಐ ಕಾಯ್ದೆ ಸೆಕ್ಷನ್ 8(1) ಅಡಿ ರಕ್ಷಣೆ ನೀಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.