ADVERTISEMENT

ಕೊರೊನಾ ವಿರುದ್ಧದ ಹೋರಾಟ l ಐದು ಪ್ರತಿಜ್ಞೆ: ಕಾರ್ಯಕರ್ತರಿಗೆ ಮೋದಿ ಸಲಹೆ

ಬಿಜೆಪಿಯ 40ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ: ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 20:00 IST
Last Updated 6 ಏಪ್ರಿಲ್ 2020, 20:00 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ:ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಯಶಸ್ಸಿಗೆ ಐದು ಪ್ರತಿಜ್ಞೆ ಸ್ವೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರಿಗೆ ಸೋಮವಾರ ಸಲಹೆ ನೀಡಿದರು.

ಬಿಜೆಪಿಯ 40ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ದವಸ–ಧಾನ್ಯ ನೀಡಲು ನಿರಂತರ ಕಾರ್ಯಾಚರಣೆ ನಡೆಸಬೇಕು, ಕನಿಷ್ಠ 5–7 ಜನರಿಗೆ ಮಾಸ್ಕ್‌ ವಿತರಿಸಬೇಕು, ವೈದ್ಯರು, ನರ್ಸ್‌ಗಳು, ಪೊಲೀಸರು ನೈರ್ಮಲ್ಯ ಕಾಪಾಡುವ ಸಿಬ್ಬಂದಿ ಹಾಗೂ ಅಗತ್ಯ ಸೇವೆ ಒದಗಿಸುವ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಲು ಆಂದೋಲನ ರೀತಿಯ ಕಾರ್ಯಕ್ರಮ ನಡೆಸಬೇಕು. ಇದಕ್ಕಾಗಿ ಪಕ್ಷದ ರಚಿಸಿದ ಐದು ತಂಡಗಳ ನೆರವು ಪಡೆಯಬೇಕು ಎಂದು ಹೇಳಿದರು.

ಆರೋಗ್ಯಸೇತು ಆ್ಯಪ್‌ ಅನ್ನು ಕನಿಷ್ಠ 40 ಜನರು ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳುವಂತೆ ಪ್ರತಿಯೊಬ್ಬ ಕಾರ್ಯಕರ್ತ ಶ್ರಮಿಸಬೇಕು. ಪಿಎಂ–ಕೇರ್ಸ್‌ ನಿಧಿಗೆ ದೇಣಿಗೆ ನೀಡುವಂತೆ ಕನಿಷ್ಠ 40 ಜನರ ಮನವೊಲಿಸಬೇಕು ಎಂದು ತಿಳಿಸಿದರು.

ADVERTISEMENT

‘ಭಾನುವಾರ ರಾತ್ರಿ 9ಕ್ಕೆ ದೇಶದ 130 ಕೋಟಿ ಜನರು ದೀಪ ಬೆಳಗುವ ಮೂಲಕ ವೈರಾಣು ವಿರುದ್ಧ ಒಗ್ಗಟ್ಟಿನ ಹೋರಾಡಿದ ಸಂಕಲ್ಪ ಮಾಡಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಸಹ ಜನರು ಅದ್ಭುತ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ಭಾರಿ ಜನಸಂಖ್ಯೆ ಹೊಂದಿರುವ ರಾಷ್ಟ್ರವೊಂದರಲ್ಲಿ ಇಂತಹ ಶಿಸ್ತು, ಸೇವಾ ಮನೋಭಾವವೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದೀರಿ’ ಎಂದು ಜನರಿಗೆ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.