ADVERTISEMENT

ಕೋವಿಡ್‌ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡಲು ಪ್ರಧಾನಿ ಮೋದಿ ಸೂಚನೆ

ಕೋವಿಡ್‌ ನಿರ್ವಹಣೆ: ಪರಿಶೀಲನಾ ಸಭೆ

ಪಿಟಿಐ
Published 6 ಮೇ 2021, 15:11 IST
Last Updated 6 ಮೇ 2021, 15:11 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಲಸಿಕೆ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ಅರ್ಹರಿಗೆ ಲಸಿಕೆ ನೀಡುವುದಕ್ಕೆ ಹಿನ್ನಡೆಯಾಗದಂತೆ ಎಲ್ಲ ರಾಜ್ಯಗಳು ಮುತುವರ್ಜಿ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿವಿಧ ರಾಜ್ಯಗಳಲ್ಲಿನ ಕೋವಿಡ್‌–19 ಪರಿಸ್ಥಿತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಕೈಗೊಂಡ ಕ್ರಮಗಳ ಕುರಿತು ಗುರುವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಮೂಲಸೌಕರ್ಯ ವೃದ್ಧಿ, ಕೊರೊನಾ ಸೋಂಕು ಹರಡವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ರಾಜ್ಯಗಳಿಗೆ ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಪ್ರಕಟಣೆ ತಿಳಿಸಿದೆ.

12 ರಾಜ್ಯಗಳಲ್ಲಿ ಲಕ್ಷಕ್ಕೂ ಅಧಿಕ ಸಕ್ರಿಯ ಕೋವಿಡ್‌–19 ಪ್ರಕರಣಗಳು ಇವೆ. ರಾಜ್ಯಗಳಿಗೆ ಈ ವರೆಗೆ ಕೋವಿಡ್‌ ಲಸಿಕೆಯ 17.7 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಪ್ರಧಾನಿಯವರಿಗೆ ವಿವರಿಸಿದರು.

‘ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಇಂಥ ಕಠಿಣ ನಿರ್ಬಂಧಗಳಿದ್ದರೂ, ಲಸಿಕೆ ಪಡೆಯಲು ಬರುವ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಲಸಿಕೆ ನೀಡುವ ಜವಾಬ್ದಾರಿ ಹೊತ್ತ ಸಿಬ್ಬಂದಿಯನ್ನು ಬೇರೆ ಕರ್ತವ್ಯಗಳಿಗೆ ನಿಯೋಜಿಸಬಾರದು ಎಂದೂ ಪ್ರಧಾನಿ ಸೂಚನೆ ನೀಡಿದರು’ ಎಂದು ಪ್ರಕಟಣೆ ತಿಳಿಸಿದೆ.

ಸಚಿವರಾದ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌, ಹರ್ಷವರ್ಧನ್‌, ಪೀಯೂಷ್‌ ಗೋಯಲ್‌, ಮನ್‌ಸುಖ್‌ ಮಾಂಡವೀಯ, ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.