
ಗುಹಾವಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿಯ ಮಹಿಳಾ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು
–ಪಿಟಿಐ ಚಿತ್ರ
ಗುವಾಹಟಿ: ‘ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಅಸ್ಸಾಂನಲ್ಲಿ ಅಧಿಕಾರದಿಂದ ದೂರವುಳಿದಿದೆ. ಅಧಿಕಾರದಲ್ಲಿ ಇದ್ದ ಅವಧಿಗಿಂತಲೂ ಈಗ ಹೆಚ್ಚು ಅಪಾಯಕಾರಿ. ಆ ಪಕ್ಷದ ನಾಯಕರು ನೀಡಿದ ವಿಷಪೂರಿತ ಹೇಳಿಕೆಗಳಿಂದ ಇದು ಸ್ಪಷ್ಟವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಖಾನಾಪಾರಾದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಯಾವಾಗಲೂ ದೇಶದ ಭದ್ರತೆಗೆ ಅಪಾಯ ಉಂಟು ಮಾಡಿದೆ. ಅಸ್ಸಾಂನಲ್ಲಿಯೂ ಕೂಡ ತನ್ನ ಅಧಿಕಾರದ ಅವಧಿಯಲ್ಲಿ ಅಭದ್ರತೆ ಹಾಗೂ ಭಯವನ್ನು ಸೃಷ್ಟಿಸಿತ್ತು’ ಎಂದು ಆರೋಪಿಸಿದ್ದಾರೆ.
‘ಕಾಂಗ್ರೆಸ್ ಆಡಳಿತದಲ್ಲಿ ಅಸ್ಸಾಂ ರಾಜ್ಯವನ್ನು ಬಂದ್, ಹಿಂಸಾಚಾರ ಹಾಗೂ ಸಂಘರ್ಷಕ್ಕೆ ತಳ್ಳಿತ್ತು. ಪ್ರತಿ ವರ್ಷ ಇದರಿಂದ 1 ಸಾವಿರ ಮಂದಿ ಮೃತಪಟ್ಟಿದ್ದು, ಇದರ ಹೊಣೆಯನ್ನು ಕಾಂಗ್ರೆಸ್ ಪಕ್ಷ ಹೊರಬೇಕು. ಈಗ ಹಲವಾರು ಯುವಕರು ಶಸ್ತ್ರಾಸ್ತ್ರ ತ್ಯಜಿಸಿ, ಸಂವಿಧಾನದ ಮಾರ್ಗ ಅನುಸರಿಸಿದ್ದು, ಅಭಿವೃದ್ಧಿ ಹಾಗೂ ಶಾಂತಿಯ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
‘ಮತ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದ್ದ ಕಾಂಗ್ರೆಸ್ ಧ್ರುವೀಕರಣಕ್ಕೆ ಮುಂದಾಗಿತ್ತು, ಇವುಗಳನ್ನು ಉತ್ತೇಜಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು’ ಎಂದು ಆರೋಪಿಸಿದ್ದಾರೆ.
‘ಮುಸ್ಲಿಂ ಲೀಗ್‌ನಿಂದ ದೇಶ ವಿಭಜನೆಯಾಯಿತು. ಈಗ ಮಾವೋವಾದಿ, ಮುಸ್ಲಿಂ ಲೀಗ್ ಹಾಗೂ ಕಾಂಗ್ರೆಸ್ (ಎಂಎಂಸಿ) ಕುರಿತು ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಮೋದಿ ಕರೆ ನೀಡಿದ್ದಾರೆ.
‘ನುಸುಳುಕೋರರಿಗೆ ಕಾಂಗ್ರೆಸ್ ಪಕ್ಷವು ನೆರವು ನೀಡುತ್ತಿದ್ದು, ಅಕ್ರಮ ನುಸುಳುಕೋರರನ್ನು ಬಿಜೆಪಿಯು ಮಟ್ಟ ಹಾಕಲಿದೆ. ಹೀಗಾಗಿ, ಮುಂದಿನ ಐದು ವರ್ಷ ರಾಜ್ಯದ ಪಾಲಿಗೆ ನಿರ್ಣಾಯಕವಾಗಿದೆ’ ಎಂದು ಹೇಳಿದ್ದಾರೆ.
‘ಏಳು ದಶಕಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವು ಬ್ರಹ್ಮಪುತ್ರ ನದಿಗೆ ಮೂರು ಸೇತುವೆಗಳನ್ನು ನಿರ್ಮಿಸಿತ್ತು, ಕಳೆದೊಂದು ದಶಕದಲ್ಲಿ ಬಿಜೆಪಿ ಸರ್ಕಾರವು 5 ಸೇತುವೆಗಳನ್ನು ನಿರ್ಮಿಸಿದೆ. ಅಸ್ಸಾಂನ ಅಸ್ಮಿತೆ ಹಾಗೂ ಸಂಪ್ರದಾಯವನ್ನು ಕಾಪಾಡುವ ನಿಟ್ಟಿನಲ್ಲಿ ಬಿಜೆಪಿಯು ಎಲ್ಲಾ ಪ‍್ರಯತ್ನಗಳನ್ನು ಮಾಡುತ್ತಿದ್ದು, ಸರ್ವತೋಮುಖ ಅಭಿವೃದ್ಧಿಯಲ್ಲಿ ತೊಡಗಿದೆ’ ಎಂದು ಈ ವೇಳೆ ಪ್ರಸ್ತಾಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.