ADVERTISEMENT

ಕಳೆದ ಏಳು ವರ್ಷಗಳಿಂದ ಪ್ರಧಾನಿಯಿಂದ ಒಂದೇ ರೀತಿಯ ಭಾಷಣ: ಖರ್ಗೆ

ಪಿಟಿಐ
Published 15 ಆಗಸ್ಟ್ 2021, 10:54 IST
Last Updated 15 ಆಗಸ್ಟ್ 2021, 10:54 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಯೋಜನೆಗಳನ್ನು ಘೋಷಿಸುತ್ತಾರೆಯೇ ಹೊರತು ಅದನ್ನು ಜಾರಿಗೆ ತರುವುದಿಲ್ಲ’ ಎಂದು ಕಾಂಗ್ರೆಸ್‌ ಭಾನುವಾರ ದೂರಿದೆ.

‘ಕಳೆದ ಏಳು ವರ್ಷದಿಂದ ಪ್ರಧಾನಿಯವರು ಒಂದೇ ರೀತಿಯ ಭಾಷಣವನ್ನು ನೀಡುತ್ತಾ ಬಂದಿದ್ದಾರೆ. ಆದರೆ ಈವರೆಗೆ ಸಣ್ಣ ರೈತರು, ನೊಂದ ವರ್ಗಗಳಿಗಾಗಿ ಏನೂ ಕೆಲಸವನ್ನು ಮಾಡಿಲ್ಲ. ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಾರೆ. ಆದರೆ ಜಾರಿಗೆ ತರುವುದಿಲ್ಲ. ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ. ಆದರೆ ಅದನ್ನು ಕಾರ್ಯಗತಗೊಳಿಸುವುದಿಲ್ಲ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದಾರೆ.

‘ಈಗ ನೂತನ ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅಪಾಯವನ್ನು ತಂದಿಟ್ಟಿದ್ದಾರೆ. ಆದರೆ ಈಗಲೂ ಅವರು ಸಣ್ಣ ರೈತರು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಆಡಳಿತವನ್ನು ದೂರುತ್ತಾರೆ. ಕೆಂಪುಕೋಟೆಯಲ್ಲಿ ಪದೇ ಪದೇ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವುದರಿಂದ ದೇಶದ ಪ್ರಗತಿಯಾಗುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರೈತರಿಗಾಗಿ ನೀರಾವರಿ ಯೋಜನೆ ಸೇರಿದಂತೆ ಹಲವರು ಕೆಲಸಗಳನ್ನು ಮಾಡಿದೆ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಯುಪಿಎ ಆಡಳಿತಾವಧಿಯಲ್ಲಿ ರೈತರ ಸಾಲವನ್ನೂ ಮನ್ನಾ ಮಾಡಿದ್ದರು’ ಎಂದು ಅವರು ತಿಳಿಸಿದರು.‘ಮೂಲಸೌಕರ್ಯ ವಲಯದ ಅಭಿವೃದ್ಧಿಗಾಗಿ ಪ್ರಧಾನಿ ಅವರು ಎರಡು ವರ್ಷಗಳ ಹಿಂದೆಯೂ ₹100 ಲಕ್ಷ ಕೋಟಿಯನ್ನು ಘೋಷಿಸಿದ್ದರು. ಈಗ ಕನಿಷ್ಠ ₹100 ಲಕ್ಷ ಕೋಟಿಯ ಸಂಖ್ಯೆಯನ್ನಾದರೂ ಬದಲಿಸಬೇಕಾಗಿತ್ತು’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಅವರು ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ಪ್ರಧಾನಿ ಅವರ 2019ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ಸಂಬಂಧಿಸಿದ ಸುದ್ದಿಯೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.