ADVERTISEMENT

‘ವಿಧವೆ ಹೇಳಿಕೆ’ಗೆ ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ತರಾಟೆಗೆ ತೆಗೆದುಕೊಂಡ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 2:14 IST
Last Updated 10 ಡಿಸೆಂಬರ್ 2018, 2:14 IST
   

ಬೆಂಗಳೂರು:ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ’ವಿಧವೆ’ ಎಂದು ಪರೋಕ್ಷವಾಗಿ ಟೀಕಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ.

ಸೋನಿಯಾ ಗಾಂಧಿ ಅವರ ಜನ್ಮ ದಿನದ ನಿಮಿತ್ತ ಶುಭಾಶಯ ಕೋರಿ ಮೋದಿ ಭಾನುವಾರ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ‘ವಿಧವೆ’ ಹೇಳಿಕೆ ಬಗ್ಗೆ ಟ್ವಿಟರ್‌ನಲ್ಲಿ ಅನೇಕರು ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಪ್ರಿಯ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ತಾಯಿ ಹೇಗೆ ಉದ್ದೇಶಪೂರ್ವಕ ವಿಧವೆಯಾಗಿಲ್ಲವೋ ಹಾಗೆಯೇ ಸೋನಿಯಾ ಗಾಂಧಿ ಕೂಡ. ನಿಮ್ಮ ಕಚೇರಿಯ ಘನತೆಯನ್ನು ಸ್ವಲ್ಪವಾದರೂ ಉಳಿಸಿಕೊಳ್ಳುತ್ತೀರಾ? ನಮ್ಮ ದೇಶವನ್ನು ಮುನ್ನಡೆಸುವ ವ್ಯಕ್ತಿ ಒಬ್ಬ ಮಹಿಳೆಯ ಬಗ್ಗೆ ಬಳಸಬಹುದಾದ ಮಾತಲ್ಲ ಇದು’ ಎಂದು ಸಾಧ್ವಿ ಖೋಸ್ಲ ಎಂಬುವವರು ಟ್ವೀಟ್ ಮಾಡಿದ್ದಾರೆ.

ADVERTISEMENT

‘ಸೋನಿಯಾ ಗಾಂಧಿ ಅವರನ್ನುದ್ದೇಶಿಸಿ ‘ವಿಧವೆ’ ಹೇಳಿಕೆ ನೀಡುವ ಮೂಲಕ ಮೋದಿ ಅವರು ಕೀಳು ಮಟ್ಟದ ಮತ್ತು ಅಸಭ್ಯ ನಿಂದನೆಯ ತುತ್ತತುದಿ ತಲುಪಿದ್ದಾರೆ’ ಎಂದು ಸ್ವಾತಿ ಚತುರ್ವೇದಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮೋದಿ ಹೇಳಿದ್ದೇನು?: ಇತ್ತೀಚೆಗೆ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಮೋದಿ ಹಿಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಧವೆಯರಿಗೆ ನೀಡುವ ಪಿಂಚಣಿ ಹಣದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಆರೋಪಿಸಿದ್ದಲ್ಲದೆ, ‘ಪಿಂಚಣಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಕಾಂಗ್ರೆಸ್‌ನ ಆ ವಿಧವೆ ಯಾರು?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರು.

ಮೋದಿ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ಸೇರಿದಂತೆ ಅನೇಕ ಗಣ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ‘ವಿಧವೆ’ ಹೇಳಿಕೆ ಪ್ರಧಾನಿ ಅವರ ಹುದ್ದೆ, ಘನತೆಗೆ ತಕ್ಕುದಲ್ಲ ಎಂದು ಅನೇಕ ಗಣ್ಯರು ಅಭಿಪ್ರಾಯಪಟ್ಟಿದ್ದರು.

ಪ್ರತಿಪಕ್ಷದವರನ್ನು ಟೀಕಿಸುವ ಭರದಲ್ಲಿ ಮೋದಿ ಅವರು ಇಡೀ ಸ್ತ್ರೀ ಕುಲವನ್ನೇ ಅವಮಾನಿಸಿದ್ದಾರೆ ಎಂದು ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

‘ತನ್ನ ತಾಯಿ ಕೂಡಾ ವಿಧವೆ ಎನ್ನುವುದನ್ನು ಮರೆತಿರುವ ಮೋದಿಯವರು ದ್ವೇಷಾಸೂಯೆಯ ರಸಾತಲ‌ ತಲುಪಿದ್ದಾರೆ. ಅವರು ಇಂತಹ ಮಾನಸಿಕ ಅಸ್ವಸ್ಥತೆಯಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸಿದ್ದರಾಮಯ್ಯ ಶನಿವಾರ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.