ADVERTISEMENT

ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ; ಕೋಚ್ ನರೇಂದ್ರ ಷಾ ಬಂಧನ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 9:48 IST
Last Updated 7 ಏಪ್ರಿಲ್ 2023, 9:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉತ್ತರಾಖಂಡ : ತರಬೇತಿ ಪಡೆಯುತ್ತಿದ್ದ ಮೂವರು ಮಹಿಳಾ ಕ್ರಿಕೆಟರ್‌ಗಳಿಗೆ(ಒಬ್ಬರು ಅಪ್ರಾಪ್ತೆ) ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೋಚ್‌ ನರೇಂದ್ರ ಷಾ ಅವರನ್ನು ಉತ್ತರಾಖಂಡದ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನರೇಂದ್ರ ಷಾ ಈ ಹಿಂದೆ ಉತ್ತರಾಖಂಡದ ಮಹಿಳಾ ಕ್ರಿಕೆಟ್‌ನ ಸಹ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಡೆಹ್ರಾಡೂನ್‌ನಲ್ಲಿ ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದರು. ಜೊತೆಗೆ ಚಮೋಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಲೈಂಗಿಕ ಆರೋಪ ಕೇಳಿ ಬಂದ ಹಿನ್ನೆಲೆ ಇವರನ್ನು ಕೋಚ್‌ ಸ್ಥಾನದಿಂದ ಅಮಾನತು ಮಾಡಿ ಉತ್ತರಖಂಡದ ಕ್ರಿಕೆಟ್‌ ಅಸೋಸಿಯೇಷನ್‌ ಆದೇಶ ಹೊರಡಿಸಿತ್ತು.

ನರೇಂದ್ರ ಷಾ ತಮ್ಮ ಕ್ರಿಕೆಟ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮೂವರು ಮಹಿಳಾ ಕ್ರಿಕೆಟಿಗರಿಗೆ (ಒಬ್ಬರು ಅಪ್ರಾಪ್ತೆ ಸೇರಿ) ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರಲಾಗಿತ್ತು. ಈ ಪ್ರಕರಣ ಹೊರ ಬರುತ್ತಿದ್ದಂತೆ ನರೇಂದ್ರ ಷಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ರಿಷಿಕೇಶದಲ್ಲಿನ ಏಮ್ಸ್‌ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗುರುವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಆ ತಕ್ಷಣ ಷಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ಪಂಕಜ್‌ ಗೈರೋಲಾ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ADVERTISEMENT

ಸಂತ್ರಸ್ತೆಯೊಬ್ಬರ ತಂದೆ ನೀಡಿದ ದೂರಿನಲ್ಲಿ, ‘ನನ್ನ ಮಗಳಿಗೆ ಷಾ ಹಲವಾರು ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಪೋನ್‌ನಲ್ಲಿ ಅಶ್ಲೀಲವಾಗಿ ಮಾತನಾಡಿದ್ದಾನೆ. ತಾನು ಹೇಳಿದ ಹಾಗೆ ಕೇಳದಿದ್ದರೆ ಮಗಳ ಕ್ರಿಕೆಟ್ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಜಾತಿ ನಿಂದನೆ ಮಾಡಿದ್ಧಾನೆ‘ ಎಂದು ಆರೋಪ ಮಾಡಿದ್ದಾರೆ.

ಆರೋಪಿ ನರೇಂದ್ರ ಷಾ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲದೇ ಯುವತಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಷಾ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಉಷಾ ನೇಗಿ ಪ್ರಧಾನಿ, ಗೃಹ ಸಚಿವರು ಹಾಗೂ ಬಿಸಿಸಿಐ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.