ADVERTISEMENT

ಕಾಶ್ಮೀರ: ಮುಂದಿನ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ಗೆ ಗೆಲುವು -ಅಬ್ದುಲ್ಲಾ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 12:26 IST
Last Updated 31 ಆಗಸ್ಟ್ 2021, 12:26 IST
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆಲುವು ಸಾಧಿಸಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು.

ಕಣಿವೆ ರಾಜ್ಯದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ನಡೆಯಲಿರುವ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಸ್ಪರ್ಧಿಸುವ ಸಿದ್ಧತೆಯಲ್ಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕಾಗಿ ಆಯೋಜಿಸಿದ್ದ ಪಾರ್ಲಿಮೆಂಟರಿ ಔಟ್‌ರೀಚ್ ಪ್ರೋಗ್ರಾಂ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಿದರೆ ನಾವು ಗೆಲ್ಲುತ್ತೇವೆ ಎನ್ನುವುದನ್ನು ಅಧಿಕಾರಯುತವಾಗಿ ಹೇಳುತ್ತಿದ್ದೇನೆ. ನ್ಯಾಷನಲ್ ಕಾನ್ಫರೆನ್ಸ್ ಇಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ’ ಎಂದು ಅವರು ಹೇಳಿದರು.

ಶ್ರೀನಗರ ಸಂಸತ್ ಕ್ಷೇತ್ರ ಪ್ರತಿನಿಧಿಸುವ ಅಬ್ದುಲ್ಲಾ ಅವರು, 2018ರ ಪಂಚಾಯತ್ ಚುನಾವಣೆ ಮತ್ತು 2019ರ ಬ್ಲಾಕ್ ಅಭಿವೃದ್ಧಿ ಕೌನ್ಸಿಲ್ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸದಿರುವುದಕ್ಕೆ ವಿಷಾದಿಸಿದರು.

‘ಮುಂದಿನ ಚುನಾವಣೆಯಲ್ಲಿ ನಾವು ಸ್ಪರ್ಧಿಸುವುದು ದೈವೇಚ್ಛೆಯಾಗಿದೆ’ ಎಂದರು.

ವೇದಿಕೆಯಲ್ಲಿ ಆಸೀನರಾಗಿದ್ದ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಅಬ್ದುಲ್ಲಾ ಅವರು, ಸರಪಂಚರು ಮತ್ತು ಪಂಚಾಯತ್‌ ಸದಸ್ಯರು ಅಧಿಕಾರಸ್ಥರಂತೆ ವರ್ತಿಸಬಾರದು. ಜನರೊಂದಿಗೆ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸಲಹೆ ನೀಡಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ಸರ್ಕಾರ ರಚನೆಯಾಗಲಿದ್ದು, ಹೊಸ ಸರ್ಕಾರ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಲಿದೆ. ಅಧಿಕಾರಿಗಳು ತಮ್ಮನ್ನು ರಾಜರಂತೆ ಭಾವಿಸಿಕೊಂಡಿದ್ದಾರೆ. ಅವರು ರಾಜರಲ್ಲ, ಜನರ ಸೇವಕರು. ಜನರಿಗಾಗಿ ಕೆಲಸ ಮಾಡಬೇಕು. ಇಂದು ಅವರು ಏನು ಮಾಡುತ್ತಿದ್ದಾರೊ ಅದೆಲ್ಲದಕ್ಕೂ ನಾಳೆ ಅವರು ಉತ್ತರದಾಯಿಗಳು’ ಎಂದು ಅಬ್ದುಲ್ಲಾ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.