ADVERTISEMENT

ಯುಎಚ್‌ಐ: ಜನರಿಂದ ಸಲಹೆ–ಸೂಚನೆ ಆಹ್ವಾನ

ನ್ಯಾಷನಲ್‌ ಡಿಜಿಟಲ್‌ ಹೆಲ್ತ್ ಮಿಷನ್‌ನಿಂದ ಅಭಿವೃದ್ಧಿ

ಪಿಟಿಐ
Published 24 ಜುಲೈ 2021, 8:23 IST
Last Updated 24 ಜುಲೈ 2021, 8:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ : ಮಹತ್ವಾಕಾಂಕ್ಷೆಯ ನ್ಯಾಷನಲ್‌ ಡಿಜಿಟಲ್‌ ಹೆಲ್ತ್ ಮಿಷನ್‌ನಡಿ ಅಭಿವೃದ್ಧಿಪಡಿಸಲಾಗುತ್ತಿರುವ ಯುಎಚ್‌ಐ (ಯುನಿಫೈಡ್‌ ಹೆಲ್ತ್ ಇಂಟರ್‌ಫೇಸ್‌) ವಿನ್ಯಾಸ ಹಾಗೂ ಸ್ವರೂಪ ಕುರಿತ ಕರಡನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದೆ.

‘ಯುಎಚ್ಐ ಕುರಿತು ಜನರು ನೀಡುವ ಸಲಹೆ–ಸೂಚನೆಗಳನ್ನು ಕ್ರೋಡೀಕರಿಸಿ, ಈ ಇಂಟರ್‌ಫೇಸ್‌ಗೆ ಅಂತಿಮ ರೂಪ ನೀಡಲಾಗುವುದು’ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಸಲಹೆ–ಸೂಚನೆಗಳನ್ನು ndhm@nha.gov.in ಇ–ಮೇಲ್‌ ಐಡಿಗೆ ಕಳುಹಿಸಬೇಕು. ಆಗಸ್ಟ್‌ 23 ಕೊನೆಯ ದಿನವಾಗಿದೆ.

ADVERTISEMENT

ಡಿಜಿಟಲ್‌ ರೂಪದಲ್ಲಿ ಹಣ ಪಾವತಿಗಾಗಿ ರೂಪಿಸಿರುವ ಯುಪಿಐ (ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ರೀತಿಯಲ್ಲಿಯೇ ಯುಎಚ್‌ಐ (ಯುನಿಫೈಡ್‌ ಹೆಲ್ತ್ ಇಂಟರ್‌ಫೇಸ್‌) ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

‘ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ, ಕೈಗೆಟಕುವ ದರದಲ್ಲಿ ಸಿಗಬೇಕು. ಈ ಸೇವೆಗಳು ಸಮರ್ಥವಾಗಿಯೂ ಇರಬೇಕು. ತಂತ್ರಜ್ಞಾನದ ನೆರವಿನ ಮೂಲಕಈ ಸೇವೆಗಳನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ನ್ಯಾಷನಲ್‌ ಡಿಜಿಟಲ್‌ ಹೆಲ್ತ್‌ ಮಿಷನ್‌ ಅನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಎನ್‌ಎಚ್‌ಎ ಸಿಇಒ ಡಾ.ಆರ್‌.ಎಸ್‌.ಶರ್ಮಾ ಹೇಳಿದ್ದಾರೆ.

ಕಳೆದ ವರ್ಷ ಘೋಷಣೆ:ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್’ ಯೋಜನೆ ಘೋಷಿಸಿದರು.

ಯೋಜನೆಯಡಿ ಪ್ರತಿಯೊಬ್ಬ ಭಾರತೀಯನಿಗೂ ಹೆಲ್ತ್ ಐಡಿ ನೀಡಲಾಗುತ್ತದೆ. ವೈದ್ಯರು ಯಾವ ಔಷಧ ತೆಗದುಕೊಳ್ಳಲು ಸೂಚಿಸಿದ್ದಾರೆ, ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಜತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವ್ಯಕ್ತಿಯ ಹೆಲ್ತ್ ಐಡಿಗೆ ಲಿಂಕ್ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.