ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಕಟ್ಟೊತ್ತಾಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:04 IST
Last Updated 17 ಡಿಸೆಂಬರ್ 2025, 7:04 IST
   

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಬುಧವಾರ ಒತ್ತಾಯಿಸಿದೆ.

ತನ್ನ ನಾಯಕರ ವಿರುದ್ಧದ ಮೋದಿ ಸರ್ಕಾರದ ಸೇಡಿನ ರಾಜಕೀಯವನ್ನು ಬಹಿರಂಗಪಡಿಸುವುದಾಗಿ ಹೇಳಿದೆ. ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ತನ್ನ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರತಿಪಾದಿಸಿದೆ.

‘ನಾವು ಸಂಸತ್ತಿನ ಒಳಗೂ ಮತ್ತು ಹೊರಗೂ ಬಿಜೆಪಿ ವಿರುದ್ಧ ಹೋರಾಡುತ್ತಲೇ ಇರುತ್ತೇವೆ. ಅವರಿಗೆ ಪಾಠ ಕಲಿಸುತ್ತೇವೆ’ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಐವರ ವಿರುದ್ಧ ಜಾರಿ ನಿರ್ದೇಶನಾಲಯವು ಹೊರಿಸಿದ್ದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ ನಿರಾಕರಿಸಿತ್ತು. ಸಂಸ್ಥೆಯ ತನಿಖೆ ಖಾಸಗಿ ದೂರಿನಿಂದ ಆಗಿದೆಯೇ ಹೊರತು ಎಫ್‌ಐಆರ್‌ನಿಂದಲ್ಲ ಎಂದು ಹೇಳಿತ್ತು.

‘ಈ ತೀರ್ಪಿನ ನಂತರ ಮೋದಿ ಮತ್ತು ಶಾ ರಾಜೀನಾಮೆ ನೀಡಬೇಕು. ಏಕೆಂದರೆ, ನ್ಯಾಯಾಲಯದ ನಿರ್ಣಯ ಅವರ ಮುಖಕ್ಕೆ ಹೊಡೆದಂತೆ. ಇದೇ ರೀತಿ ಅವರು ಇತರರಿಗೆ ಕಿರುಕುಳ ನೀಡಬಾರದು’ ಎಂದು ಖರ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪಕ್ಷದ ನಾಯಕರಾದ ಕೆ.ಸಿ. ವೇಣುಗೋಪಾಲ್, ಅಭಿಷೇಕ್ ಸಿಂಘ್ವಿ, ಜೈರಾಮ್ ರಮೇಶ್ ಮತ್ತು ಪವನ್ ಖೇರಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಮತ್ತೊಮ್ಮೆ ಇದೇ ರೀತಿ ಮಾಡಿದರೆ ಜನರು ಸಹಿಸುವುದಿಲ್ಲ ಎಂಬುದು ಅವರಿಗೆ ಅರ್ಥವಾಗಬೇಕು’ಎಂದು ಖರ್ಗೆ ಹೇಳಿದ್ದಾರೆ.

‘ತನಿಖಾ ಸಂಸ್ಥೆಗಳು ನಮ್ಮ ನಾಯಕರಿಗೆ ಸಮನ್ಸ್ ನೀಡಿದಾಗಲೆಲ್ಲ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ರಾಜಕೀಯವಾಗಿ ಈ ವಿಷಯದ ವಿರುದ್ಧ ಹೋರಾಡಿದೆ. ನಾವು ಬೀದಿಗಳಲ್ಲಿ, ಸಂಸತ್ತಿನ ಒಳಗೂ ಹೊರಗೂ ಹೋರಾಡುತ್ತಿದ್ದೇವೆ. ಅದನ್ನು ಮುಂದುವರಿಸುತ್ತೇವೆ ಮತ್ತು ಅವರಿಗೆ ಪಾಠ ಕಲಿಸುತ್ತೇವೆ’ ಎಂದಿದ್ದಾರೆ.

ಮೋದಿ ಸರ್ಕಾರದ ಸೇಡಿನ ರಾಜಕೀಯವನ್ನು ಕಾಂಗ್ರೆಸ್ ಬಹಿರಂಗಪಡಿಸುತ್ತದೆ ಎಂದು ವೇಣುಗೋಪಾಲ್ ಪ್ರತಿಪಾದಿಸಿದ್ದಾರೆ.

ಇಡೀ ಕಾಂಗ್ರೆಸ್ ಪಡೆ ಆಕ್ರೋಶಗೊಂಡಿದೆ. ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಭಾರತದಾದ್ಯಂತ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತದೆ ಎಂದಿದ್ದಾರೆ.

ಕಾನೂನು ಗದ್ದಲಕ್ಕಿಂತ ಜೋರಾಗಿ ಮಾತನಾಡಿದೆ ಎಂದ ಸಿಂಘ್ವಿ, ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರಾಜಕೀಯ ಪ್ರತೀಕಾರ ಮತ್ತು ಕಿರುಕುಳದ ಕಥೆ ಎಂದು ಕರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.