ADVERTISEMENT

National Herald case | ಸೋನಿಯಾ, ರಾಹುಲ್‌ಗೆ ನೋಟಿಸ್‌ ನೀಡಲು ಕೋರ್ಟ್‌ ನಕಾರ

ಪಿಟಿಐ
Published 25 ಏಪ್ರಿಲ್ 2025, 13:08 IST
Last Updated 25 ಏಪ್ರಿಲ್ 2025, 13:08 IST
<div class="paragraphs"><p>ಸೋನಿಯಾ, ರಾಹುಲ್‌</p></div>

ಸೋನಿಯಾ, ರಾಹುಲ್‌

   

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಜತೆ ನಂಟಿನ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ಈ ಹಂತದಲ್ಲಿ ನೋಟಿಸ್‌ ಜಾರಿ ಮಾಡಲು ದೆಹಲಿಯ ನ್ಯಾಯಾಲಯ ಶುಕ್ರವಾರ ನಿರಾಕರಿಸಿತು.

ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಲಾದ ಆರೋಪಪಟ್ಟಿಯನ್ನು ಪರಿಗಣಿಸಿ, ಆರೋಪಿಗಳಿಗೆ ನೋಟಿಸ್‌ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯ(ಇ.ಡಿ), ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಶಾಲ್‌ ಗೋಗ್ನೆ.‘ಕಾಯ್ದೆಯಲ್ಲಿನ ಹೊಸ ಅವಕಾಶಗಳ ಪ್ರಕಾರ, ಆರೋಪಿಗಳ ಹೇಳಿಕೆಗಳನ್ನು ಪಡೆಯದೇ ಅವರ ವಿರುದ್ಧದ ಆರೋಪಪಟ್ಟಿಯನ್ನು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಪ್ರಕರಣದ ವಿಚಾರಣೆ ದೀರ್ಘ ಕಾಲ ನಡೆಯುವುದು ಬೇಡ. ಕೂಡಲೇ ಆರೋಪಿಗಳಿಗೆ ನೋಟಿಸ್‌ ಜಾರಿ ಮಾಡಿ’ ಎಂದು ಇ.ಡಿ ಪರ ವಕೀಲರು ಮನವಿ ಮಾಡಿದರು.

‘ನೋಟಿಸ್‌ ನೀಡುವ ಅಗತ್ಯವಿದೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಬೇಕು. ಅಲ್ಲದೇ, ಅರ್ಜಿಯಲ್ಲಿ ಏನಾದರೂ ನ್ಯೂನತೆಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ನ್ಯಾಯಾಧೀಶರು ಹೇಳಿದರು.

‘ಆರೋಪಪಟ್ಟಿಯಲ್ಲಿ ಕೆಲ ನಿರ್ದಿಷ್ಟ ದಾಖಲೆಗಳು ನಾಪತ್ತೆಯಾಗಿರುವ ಕುರಿತು ಕೋರ್ಟ್‌ ಸಿಬ್ಬಂದಿ ಹೇಳಿದ್ದಾರೆ. ಈ ದಾಖಲೆಗಳನ್ನು ನೀಡುವಂತೆ ಇ.ಡಿಗೆ ನಿರ್ದೇಶನ ನೀಡಲಾಗಿದೆ. ಅವುಗಳನ್ನು ಪರಿಶೀಲಿಸಿದ ನಂತರ ನೋಟಿಸ್‌ ಜಾರಿ ಕುರಿತು ನಿರ್ಧರಿಸಲಾಗುವುದು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇ.ಡಿ ಪರ ವಕೀಲರು, ‘ಆರೋಪಪಟ್ಟಿ ಸಂಪೂರ್ಣ ಪಾರದರ್ಶಕವಾಗಿದೆ. ಯಾವುದನ್ನೂ ಮುಚ್ಚಿಟ್ಟಿಲ್ಲ’ ಎಂದು ಇ.ಡಿ ಪರ ವಕೀಲರು ಹೇಳಿದರು.

ಆಗ, ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.