ADVERTISEMENT

ರಾಷ್ಟ್ರೀಯ ಐಇಡಿ ದತ್ತಾಂಶ ವೇದಿಕೆ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ

ಪಿಟಿಐ
Published 9 ಜನವರಿ 2026, 14:33 IST
Last Updated 9 ಜನವರಿ 2026, 14:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುರುಗ್ರಾಮ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ರಾಷ್ಟ್ರೀಯ ಡಿಜಿಟಲ್ ಐಇಡಿ ದತ್ತಾಂಶ ನಿರ್ವಹಣಾ ವ್ಯವಸ್ಥೆ’ಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ (ಎನ್‌ಐಡಿಎಂಎಸ್‌) ಶುಕ್ರವಾರ ಉದ್ಘಾಟಿಸಿದರು. 

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, ಐಐಟಿ–ದೆಹಲಿ, ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹಾಗೂ ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರಗಳ ಸಹಾಯದೊಂದಿಗೆ ಭಯೋತ್ಪಾದನಾ ನಿಗ್ರಹ ದಳವು (ಎನ್‌ಎಸ್‌ಜಜಿ) ಎನ್‌ಐಡಿಎಂಎಸ್‌ ಅನ್ನು ಅಭಿವೃದ್ಧಿಪಡಿಸಿದೆ. 

ವಿವಿಧ ರೀತಿಯ ಬಾಂಬ್‌ ದಾಳಿಯ ಮಾದರಿಗಳು ಹಾಗೂ ಕಾರ್ಯವಿಧಾನವನ್ನು ವಿಶ್ಲೇಷಿಸಲು, ಪೊಲೀಸರು, ವಿವಿಧ ತನಿಖಾ ಸಂಸ್ಥೆಗಳು, ರಾಜ್ಯ ಭಯೋತ್ಪಾದಕ ನಿಗ್ರಹ ದಳಗಳು ಹಾಗೂ ಎನ್‌ಐಎ ಸೇರಿದಂತೆ ಹಲವು ಸಂಸ್ಥೆಗಳಿಗೆ ಸಮಗ್ರ ದತ್ತಾಂಶವನ್ನು ಒದಗಿಸುತ್ತದೆ. 

ADVERTISEMENT

‘ಇದು ಭಯೋತ್ಪಾದನೆಯ ವಿರುದ್ಧ ಮುಂದಿನ ಪೀಳಿಗೆಗೆ ಭದ್ರತಾ ಗುರಾಣಿಯಾಗಿ ಹಾಗೂ ದೇಶದ ಆಸ್ತಿಯಾಗಿ ಒದಗಿಬರಲಿದೆ. ದೇಶದಲ್ಲಿ ನಡೆಯುವ ಎಲ್ಲಾ ರೀತಿಯ ಬಾಂಬ್‌ ದಾಳಿಗಳನ್ನು ಸಮಗ್ರವಾಗಿ ತಡೆಗಟ್ಟುವ ಗೋಡೆಯಾಗಿರಲಿದೆ’ ಎಂದು ಅಮಿತ್‌ ಶಾ ಹೇಳಿದರು. 

ಕಚ್ಚಾ ಬಾಂಬ್‌ ಸ್ಫೋಟಗಳಿಗೆ ಸಂಬಂಧಿಸಿದಂತೆ ‘ಒಂದು ರಾಷ್ಟ್ರ, ಒಂದು ದತ್ತಾಂಶ ಭಂಡಾರ’ವಾಗಿ ಎನ್‌ಐಡಿಎಂಎಸ್‌ ಕಾರ್ಯನಿರ್ವಹಿಸಲಿದೆ. ಸಂಗ್ರಹಿಸಲಾಗುವ ವಿಧಿವಿಜ್ಞಾನ ಸಾಕ್ಷ್ಯಗಳ ಗುಣಮಟ್ಟ ಹೆಚ್ಚಿಸುವ ಮೂಲಕ ತನಿಖೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಹಾಗೂ ಸಂಸ್ಥೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸುತ್ತದೆ ಎಂದೂ ಹೇಳಿದರು. 

ದೇಶದಲ್ಲಿ ಕಚ್ಚಾ ಬಾಂಬ್‌ (ಐಇಡಿ) ಸ್ಫೋಟಗಳನ್ನು, ಆಂತರಿಕವಾಗಿ ಸವಾಲೊಡ್ಡುವ ಬೆದರಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದರ ದಾಳಿಗಳಿಂದಾಗಿ ಸಾವಿರಾರು ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.

ಏನಿದು ಎನ್‌ಐಡಿಎಂಎಸ್‌

ನ್‌ಐಡಿಎಂಎಸ್‌ ದೇಶದಲ್ಲಿ ನಡೆಯುವ ಎಲ್ಲಾ ರೀತಿಯ ಬಾಂಬ್‌ ದಾಳಿಗಳನ್ನು ವಿಶ್ಲೇಷಿಸುವ ಎನ್‌ಎಸ್‌ಜಿಯ ‘ರಾಷ್ಟ್ರೀಯ ಬಾಂಬ್‌ ದತ್ತಾಂಶ ಕೇಂದ್ರ’ದ ಭಾಗವಾಗಿದೆ. ಭಯೋತ್ಪಾದನೆ ಬಾಂಬ್‌ ದಾಳಿಗಳು ಮತ್ತು ಬಂಡಾಯ ನಿಗ್ರಹ ಕ್ಷೇತ್ರದಲ್ಲಿ ಸರ್ಕಾರಿ ಸಂಸ್ಥೆಗಳಿಗೆ ನೈಜ ಸಮಯದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯನ್ನು ಇದು ಹೊಂದಿದೆ.  ಎಲ್ಲಾ ರೀತಿಯ ಬಾಂಬ್ ದಾಳಿಗಳನ್ನು ನಿಖರವಾಗಿ ಅಧ್ಯಯನ ಮಾಡಲು ಕೃತಕ ಬುದ್ಧಿಮತ್ತೆ (ಎ.ಐ) ಹಾಗೂ ಯಾಂತ್ರಿಕ ಕಲಿಕಾ ಸಾಧನಗಳನ್ನು ಎನ್‌ಐಡಿಎಂಎಸ್‌ನಲ್ಲಿ ಅಳವಡಿಸಲಾಗಿದೆ.  ಎನ್‌ಐಡಿಎಂಎಸ್‌ ಸದ್ಯ 800 ಬಳಕೆದಾರರನ್ನು (ವಿವಿಧ ಸಂಸ್ಥೆಗಳು) ಹೊಂದಿದೆ. ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ಸ್ಫೋಟದ ನಂತರ ತನಿಖೆ ನಡೆಸಲು ಹಾಗೂ ಬಾಂಬ್‌ ದಾಳಿಗಳನ್ನು ತಡೆಯಲು ಮುನ್ಸೂಚನೆ ನೀಡುವಲ್ಲಿಯೂ ಇದು ನೆರವಾಗಲಿದೆ ಎಂದು ಎನ್ಎಸ್‌ಜಿ ಹೇಳಿದೆ.  ಎನ್‌ಐಡಿಎಂಎಸ್‌ ಅನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ 26 ದೇಶಗಳನ್ನು ಸಂಪರ್ಕಿಸಲಾಗಿದೆ. ಅವುಗಳಲ್ಲಿ ಇಂಥದ್ದೊಂದು ವ್ಯವಸ್ಥೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.