ADVERTISEMENT

ಗ್ಲೋಬಲ್ ಗ್ಲೋಬ್ ರೇಸ್‌: ವಿಶ್ವಪರ್ಯಟನೆ ಸ್ಪರ್ಧಿಯ ರಕ್ಷಣೆಗೆ ಕಾರ್ಯಾಚರಣೆ

ಗ್ಲೋಬಲ್ ಗ್ಲೋಬ್ ರೇಸ್‌ನಲ್ಲಿ ಭಾರತದ ಪ್ರತಿನಿಧಿಯ ದೋಣಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 20:32 IST
Last Updated 22 ಸೆಪ್ಟೆಂಬರ್ 2018, 20:32 IST
ಕಮಾಂಡರ್ ಅಭಿಲಾಷ್ ಟಾಮಿ
ಕಮಾಂಡರ್ ಅಭಿಲಾಷ್ ಟಾಮಿ   

ನವದೆಹಲಿ:ಹಾಯಿದೋಣಿಗೆ ಹಾನಿಯಾಗಿಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಒಬ್ಬಂಟಿಯಾಗಿ ಸಿಲುಕಿರುವ ಕಮಾಂಡರ್ ಅಭಿಲಾಷ್ ಟಾಮಿ ಅವರ ರಕ್ಷಣೆಗೆ ಭಾರತೀಯ ನೌಕಾಪಡೆಯ ನೌಕೆಗಳು ಧಾವಿಸುತ್ತಿವೆ.

ಹಾಯಿದೋಣಿಯಲ್ಲಿ ಒಬ್ಬಂಟಿಯಾಗಿ ಭೂಮಿ ಸುತ್ತಿಬರುವ ‘ಗೋಲ್ಡನ್ ಗ್ಲೋಬ್ ರೇಸ್’ನಲ್ಲಿ ಭಾರತವನ್ನು ಟಾಮಿ ಪ್ರತಿನಿಧಿಸುತ್ತಿದ್ದಾರೆ. ಬಿರುಗಾಳಿ ಮತ್ತು ಭಾರಿ ಅಲೆಗೆ ಸಿಲುಕಿ ಅವರು ಪ್ರಯಾಣಿಸುತ್ತಿದ್ದ ‘ತುರಿಯಾ’ ದೋಣಿಯ ಹಾಯಿಕಂಬವು ತುಂಡಾಗಿದೆ. ಜತೆಗೆ ಅವರ ಬೆನ್ನಿಗೆ ಬಲವಾದ ಗಾಯವಾಗಿದೆ.ಕನ್ಯಾಕುಮಾರಿಯಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 5,020 ಕಿ.ಮೀನಷ್ಟು ದೂರದಲ್ಲಿ ಅವರು ಇರಬಹುದು ಎಂದು ಅಂದಾಜಿಸಲಾಗಿದೆ.

‘ಬೆನ್ನಿಗೆ ಗಾಯವಾಗಿರುವ ಕಾರಣ ಅಲುಗಾಡಲೂ ಆಗುತ್ತಿಲ್ಲ. ಆದರೆ ದೋಣಿಯಲ್ಲಿ ನಾನು ಸುರಕ್ಷಿತವಾಗಿದ್ದೇನೆ’ ಎಂದು ಅವರು ಸ್ಯಾಟಲೈಟ್ ಫೋನಿನ ಮೂಲಕ ಮಾಹಿತಿ ನೀಡಿದ್ದರು. ಹೀಗಾಗಿ ಅವರ ರಕ್ಷಣೆಗೆ ಐಎನ್‌ಎಸ್ ಸಾತ್ಪುರ ಯುದ್ಧನೌಕೆ, ಚೇತಕ್ ಹೆಲಿಕಾಪ್ಟರ್ ಮತ್ತು ಐಎನ್‌ಎಸ್ ಜ್ಯೋತಿ ತೈಲವಾಹಕ ನೌಕೆಗಳು ಧಾವಿಸುತ್ತಿವೆ.

ADVERTISEMENT

ಆಸ್ಟ್ರೇಲಿಯಾದಿಂದಲೂ ಒಂದು ರಕ್ಷಣಾ ತಂಡವು ಟಾಮಿ ಅವರತ್ತ ಧಾವಿಸುತ್ತಿದೆ.

ಭೂಮಿಯ ಸುತ್ತ ಒಂಟಿಪಯಣ

ಮೊದಲ ‘ಗೋಲ್ಡನ್ ಗ್ಲೋಬ್ ರೇಸ್’ 1968–69ರಲ್ಲಿ ನಡೆದಿತ್ತು. ಅಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಲ್ಲಿ ರಾಬಿನ್ ನಾಕ್ಸ್ ಜಾನ್‌ಸ್ಟನ್ ಮಾತ್ರ ಪಯಣವನ್ನು ಪೂರ್ಣಗೊಳಿಸಿದ್ದರು. ಏಕಾಂಗಿಯಾಗಿ, ಯಾರ ನೆರವೂ ಇಲ್ಲದೆ ಮತ್ತು ನಿರಂತರ ಪಯಣದ ಮೂಲಕ 312 ದಿನಗಳನ್ನು ಭೂಮಿ ಸುತ್ತಿ ಬಂದ ಮೊದಲ ನಾವಿಕ ರಾಬಿನ್. ಆನಂತರ ಅಂತಹ ಸ್ಪರ್ಧೆ ನಡೆದೇ ಇರಲಿಲ್ಲ. ಮೊದಲ ಸ್ಪರ್ಧೆಯ 50ನೇ ವರ್ಷಾಚರಣೆ ಅಂಗವಾಗಿ ಈ ವರ್ಷ ಮತ್ತೆ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಗೆ ಭಾರತೀಯ ನೌಕಾಪಡೆಯ ಕಮಾಂಡರ್ ಅಭಿಲಾಷ್ ಟಾಮಿ ಅವರನ್ನು ಆಹ್ವಾನಿಸಲಾಗಿತ್ತು.

ನಿಯಮಗಳು

* ಮೊದಲ ಸ್ಪರ್ಧೆಯಲ್ಲಿ ಇದ್ದ ಸೌಲಭ್ಯಗಳು, ಬಳಕೆಯಾಗಿದ್ದ ತಂತ್ರಜ್ಞಾನಗಳಷ್ಟೇ ಲಭ್ಯ

* ನಿರಂತರವಾಗಿ ಪ್ರಯಾಣಿಸುತ್ತಲೇ ಇರಬೇಕು. ಯಾರ ನೆರವೂ ಇರುವುದಿಲ್ಲ

* ಕಾಗದದ ಭೂಪಟವನ್ನು ಬಳಸಿಕೊಂಡು ಹಾದಿ ಗುರುತಿಸಿಕೊಳ್ಳಬೇಕು

* ಸಂಪರ್ಕಕ್ಕೆ ಒಂದು ಸ್ಯಾಟಲೈಟ್ ಫೋನ್‌ ನೀಡಲಾಗಿರುತ್ತದೆ. ಅವಘಡ ಮತ್ತು ವೈದ್ಯಕೀಯ ನೆರವು ಬೇಕಿದ್ದರೆ ಮಾತ್ರ ಅದನ್ನು ಬಳಸಬೇಕು


55,560 ಕಿ.ಮೀ.

ಸ್ಪರ್ಧೆಯಲ್ಲಿ ಕ್ರಮಿಸಬೇಕಾದ ದೂರ

19,446 ಕಿ.ಮೀ.

ಕಮಾಂಡರ್ ಅಭಿಲಾಷ್ ಟಾಮಿ ಈಗಾಗಲೇ ಕ್ರಮಿಸಿರುವ ಅಂತರ

ಸ್ಪರ್ಧೆ ಆರಂಭವಾಗಿ84 ದಿನಗಳು ಕಳೆದಿವೆ

13 ಸ್ಪರ್ಧಿಗಳು ಕಣದಲ್ಲಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.