ADVERTISEMENT

ಛತ್ತೀಸಗಢ: ಒಟ್ಟು ₹37 ಲಕ್ಷ ಇನಾಮು ಘೊಷಣೆಯಾಗಿದ್ದ 22 ನಕ್ಸಲರ ಶರಣಾಗತಿ

ಪಿಟಿಐ
Published 11 ಜುಲೈ 2025, 11:39 IST
Last Updated 11 ಜುಲೈ 2025, 11:39 IST
   

ನಾರಾಯಣಪುರ: ಒಟ್ಟು ₹37.5 ಲಕ್ಷ ಇನಾಮು ಘೋಷಣೆಯಾಗಿದ್ದ 22 ಮಂದಿ ನಕ್ಸಲರು ಛತ್ತೀಸಗಢದ ನಾರಾಯಣಪುರ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ಮಾವೋವಾದಿಗಳ ಮಾಡ್ ವಿಭಾಗದ ಕುತುಲ್, ನೆಲ್ನಾರ್ ಮತ್ತು ಇಂದ್ರಾವತಿ ಪ್ರದೇಶ ಸಮಿತಿಗಳಿಗೆ ಸೇರಿದ ಈ ನಕ್ಸಲರು ಹಿರಿಯ ಪೊಲೀಸ್ ಅಧಿಕಾರಿಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಇಂಡೊ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.

ಹುರುಳಿಲ್ಲದ ಮಾವೋವಾದಿ ಸಿದ್ಧಾಂತ ಮತ್ತು ನಿಷೇಧಿತ ಸಂಘಟನೆಯಲ್ಲಿ ಬೆಳೆಯುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ನಿರಾಶೆಗೊಂಡಿರುವುದಾಗಿ ಅವರು ತಿಳಿಸಿದ್ದಾರೆ ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ಹೇಳಿದ್ದಾರೆ.

ADVERTISEMENT

ಜಿಲ್ಲೆಯ ಮಾಡ್ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ಶಸ್ತ್ರಾಸ್ತ್ರ ತ್ಯಜಿಸಿದ ನಕ್ಸಲರಲ್ಲಿ ವಿಭಾಗೀಯ ಸಮಿತಿ ಸದಸ್ಯರಾದ ಮಂಕು ಕುಂಜಂ (33) ಅವರ ಬಗ್ಗೆ ಮಾಹಿತಿ ನೀಡಿದವರಿಗೆ ₹8 ಲಕ್ಷ ಬಹುಮಾನ, ಹಿಡ್ಮೆ ಕುಂಜಂ (28), ಪುನ್ನಾ ಲಾಲ್ ಅಲಿಯಾಸ್ ಬೋಟಿ (26) ಮತ್ತು ಸನಿರಾಮ್ ಕೊರ್ರಂ (25) ಎಂದು ಗುರುತಿಸಲಾದ ಮೂವರು ಪ್ರದೇಶ ಸಮಿತಿ ಸದಸ್ಯರ ತಲೆಗೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಇತರೆ ಹನ್ನೊಂದು ಮಂದಿ ತಲೆಗೆ ತಲಾ ₹1 ಲಕ್ಷ, ಇತರ ಏಳು ಮಂದಿಗೆ ತಲೆಗೆ ₹50,000 ಬಹುಮಾನ ಘೋಷಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ನಕ್ಸಲರ ಶರಣಾಗತಿಯಲ್ಲಿ ನರನ್‌ಪುರ ಪೊಲೀಸರು, ಅದರ ಜಿಲ್ಲಾ ಮೀಸಲು ಪಡೆ, ಐಟಿಬಿಪಿ ಮತ್ತು ಬಿಎಸ್‌ಎಫ್ ಪ್ರಮುಖ ಪಾತ್ರ ವಹಿಸಿವೆ. ಈ ಬೆಳವಣಿಗೆ ಮಾವೋವಾದಿ ಪಡೆಗಳಿಗೆ ಭಾರಿ ಹೊಡೆತ ನೀಡಿದೆ. ನಕ್ಸಲ್ ಮುಕ್ತ ಮಾಡ್ ಕನಸು ನನಸಾಗುತ್ತಿದೆ ಎಂದು ಗುರಿಯಾ ಹೇಳಿದರು.

ಶರಣಾದ ಎಲ್ಲ ನಕ್ಸಲರಿಗೆ ತಲಾ ₹50,000 ಸಹಾಯಧನ ನೀಡಲಾಯಿತು. ಸರ್ಕಾರದ ನೀತಿಯ ಪ್ರಕಾರ ಅವರಿಗೆ ಪುನರ್ವಸತಿ ಯೋಜನೆಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.