ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
–ಪಿಟಿಐ ಚಿತ್ರ
ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದೆ. ಈ ಒಪ್ಪಂದದ ಪ್ರಕಾರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು 51 ಸ್ಥಾನಗಳಲ್ಲಿ, ಕಾಂಗ್ರೆಸ್ ಪಕ್ಷವು 32 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ.
ಸಿಪಿಎಂ ಮತ್ತು ಜೆಕೆಎನ್‌ಪಿಪಿ ಪಕ್ಷಗಳಿಗೆ ತಲಾ ಒಂದು ಸ್ಥಾನ ಬಿಟ್ಟುಕೊಡಲಾಗಿದೆ. ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ನಿವಾಸದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಯಿತು.
ಕೇಂದ್ರಾಡಳಿತ ಪ್ರದೇಶದ ಐದು ಸ್ಥಾನಗಳಲ್ಲಿ ಸ್ನೇಹಪೂರ್ವಕ ಸ್ಪರ್ಧೆ ಇರಲಿದೆ ಎಂದು ಎರಡೂ ಪಕ್ಷಗಳು ಹೇಳಿವೆ. ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷ ಸ್ಪರ್ಧಿಸಲಿದೆ, ಕಣಕ್ಕೆ ಇಳಿಯುವ ಅಭ್ಯರ್ಥಿ ಯಾರು ಎಂಬುದನ್ನು ಮುಂದೆ ತಿಳಿಸಲಾಗುವುದು ಎಂದು ಪಕ್ಷಗಳ ಮುಖಂಡರು ತಿಳಿಸಿದರು.
‘ದೇಶದಲ್ಲಿ ಕೋಮು ಆಧಾರದಲ್ಲಿ ವಿಭಜನೆ ಸೃಷ್ಟಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹೋರಾಟ ನಡೆಸುವ ಉದ್ದೇಶದೊಂದಿಗೆ ಇಂಡಿಯಾ ಮೈತ್ರಿಕೂಟವನ್ನು ಆರಂಭಿಸಲಾಗಿದೆ’ ಎಂದು ಅಬ್ದುಲ್ಲಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಹಾಗೂ ದೇಶದ ಆತ್ಮವನ್ನು ರಕ್ಷಿಸುವ ಉದ್ದೇಶವು ಎರಡೂ ಪಕ್ಷಗಳಿಗೆ ಇದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದರು.
‘ನಾವು ಸರ್ಕಾರ ರಚಿಸಿದಾಗ, ಸಾಮಾನ್ಯ ಕನಿಷ್ಠ ಕಾರ್ಯಸೂಚಿಯನ್ನು ಹೊಂದಲಿದ್ದೇವೆ’ ಎಂದು ವೇಣುಗೋಪಾಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.