ADVERTISEMENT

ಜಮ್ಮು–ಕಾಶ್ಮೀರ: ಶೀಘ್ರ ಚುನಾವಣೆಗೆ ಮನವಿ

ಪ್ರಧಾನಿ ಮೋದಿ ಭೇಟಿ ಮಾಡಿದ ನ್ಯಾಶನಲ್‌ ಕಾನ್ಫರನ್ಸ್‌ ನಿಯೋಗ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:21 IST
Last Updated 1 ಆಗಸ್ಟ್ 2019, 19:21 IST
ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಸಂಸದ, ನಿವೃತ್ತ ನ್ಯಾಯಮೂರ್ತಿ ಹಸ್‌ನೈನ್‌ ಮಸೂದಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದರು  –ಪಿಟಿಐ ಚಿತ್ರ
ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ, ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಸಂಸದ, ನಿವೃತ್ತ ನ್ಯಾಯಮೂರ್ತಿ ಹಸ್‌ನೈನ್‌ ಮಸೂದಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿ ಮಾಡಿದರು  –ಪಿಟಿಐ ಚಿತ್ರ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ವರ್ಷಾಂತ್ಯ ದೊಳಗೆ ಚುನಾವಣೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾಗಿ ಮನವಿ ಮಾಡಿದೆ.

ಪ್ರಧಾನಿ ಜತೆಗೆ 20 ನಿಮಿಷಗಳ ಕಾಲ ಚರ್ಚೆ ನಡೆಸಿದ ನಿಯೋಗವು, ಕಾಶ್ಮೀರ ಕಣಿವೆಯಲ್ಲಿ ಪರಿಸ್ಥಿತಿ ಹದಗೆಡಲು ಕಾರಣವಾಗುವ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದೆ.

‘ಕಾಶ್ಮೀರ ಕಣಿವೆಯ ಪರಿಸ್ಥಿತಿ ಮತ್ತು ಚುನಾವಣೆ ಕುರಿತು ಪ್ರಧಾನಿ ಜತೆಗೆ ಚರ್ಚೆ ನಡೆಸಿದೆವು. ಕಣಿವೆ ಜನರ ಭಾವನೆಗಳನ್ನು ಮೋದಿ ಅವರ ಗಮನಕ್ಕೆ ತಂದಿದ್ದೇವೆ. ಕೆಲವು ವಿಷಯಗಳ ಕುರಿತು ಭಯದ ವಾತಾ ವರಣ ಸೃಷ್ಟಿಯಾಗಿದೆ ಎಂದೂ ತಿಳಿಸಿ ದ್ದೇವೆ’ ಎಂದು ನಿಯೋಗದಲ್ಲಿದ್ದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲ ಪತ್ರಕರ್ತರಿಗೆ ತಿಳಿಸಿದರು.

ADVERTISEMENT

ಸಂವಿಧಾನದ 35ಎ ವಿಧಿಯನ್ನು ರದ್ದುಗೊಳಿಸುವ ಸಾಧ್ಯತೆ ಬಗ್ಗೆ ಎದ್ದಿ ರುವ ಊಹಾಪೋಹಗಳ ಬಗ್ಗೆ ಪ್ರಧಾನಿ ಯವರ ಜತೆಗೆ ಚರ್ಚಿಸಲಾಯಿತೆ ಎಂದು ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಅವರು ಸ್ಪಷ್ಟಪಡಿಸಲಿಲ್ಲ’ ಎಂದು ಒಮರ್‌ ಹೇಳಿದರು.

‘ಸಂವಿಧಾನದ 35ಎ ಮತ್ತು 370 ವಿಧಿಯನ್ನು ರದ್ದುಗೊಳಿಸುವ ವಿಷಯ ಸೇರಿದಂತೆ ಯಾವುದೇ ಕ್ರಮ ತೆಗೆದುಕೊಳ್ಳದಿರಲು ನಾವು ಮನವಿ ಮಾಡಿದ್ದೇವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ತಮಗೆ ಯಾರು ಬೇಕು ಎಂಬುದನ್ನು ಜನರು ಆಯ್ಕೆ ಮಾಡಲಿ. ಜನರ ತೀರ್ಪನ್ನು ನಾವು ಸ್ವೀಕರಿಸಲು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

‘ಈ ಚರ್ಚೆಯು ನಮಗೆ ತೃಪ್ತಿ ತಂದಿದೆ’ ಎಂದ ಒಮರ್‌, ನಿಯೋಗಕ್ಕೆ ಪ್ರಧಾನಿ ನೀಡಿರುವ ಯಾವುದೇ ಭರವಸೆಯನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಕಾಶ್ಮೀರ ಕಣಿವೆಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಯ 10,000 ಸಿಬ್ಬಂದಿಯನ್ನು ಕಳುಹಿಸಿದ ಬೆನ್ನಲ್ಲೇ ಎನ್‌ಸಿ ನಿಯೋಗವು ಮೋದಿ ಅವರನ್ನು ಭೇಟಿಯಾಗಿದ್ದು ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.