
ನವದೆಹಲಿ: ಬೈಜುಸ್ ದಿವಾಳಿತನ ಪ್ರಕ್ರಿಯೆ ಹಿಂಪಡೆಯಲು ಬಿಸಿಸಿಐ ಸಾಲಗಾರರ ಸಮಿತಿಯ ಅನುಮತಿ ಪಡೆಯಬೇಕು ಎಂದು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(ಎನ್‌ಸಿಎಲ್ಎಟಿ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬೈಜು ರವೀಂದ್ರನ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಅರ್ಜಿಯ ವಿಚಾರಣೆಗೆ ನಿರಾಕರಿಸಿದ ನ್ಯಾಯಾಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ.ವಿ ವಿಶ್ವನಾಥನ್ ಅವರ ಪೀಠವು, ಮುಂದಿನ ಪ್ರಕ್ರಿಯೆಯನ್ನು ನಡೆಸುವಂತೆ ರವೀಂದ್ರನ್ ಪರ ವಕೀಲರಿಗೆ ಸೂಚಿಸಿತು.
ಏಪ್ರಿಲ್ 17ರಂದು ಎನ್‌ಸಿಎಲ್ಎಟಿನ ನೀಡಿದ್ದ ಆದೇಶದ ವಿರುದ್ಧ ಬೈಜುಸ್ ಸಹಸಂಸ್ಥಾಪಕ ರಿಜು ರವೀಂದ್ರನ್ ಮತ್ತು ಬಿಸಿಸಿಐ ಕೂಡ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್ ಜುಲೈನಲ್ಲಿ ವಜಾಗೊಳಿಸಿತ್ತು.
ಬಿಸಿಸಿಐ ಪ್ರಾಯೋಜಕತ್ವಕ್ಕೆ ಸಂಬಂಧಿಸಿ ಹಣ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ಬೈಜುಸ್ ಮಾತೃ ಸಂಸ್ಥೆ ಥಿಂಕ್ ಆ್ಯಂಡ್ ಲರ್ನ್ ಪ್ರೈವೆಟ್ ಲಿಮಿಟೆಡ್ ವಿರುದ್ಧ ಬಿಸಿಸಿಐ ದಿವಾಳಿ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಬಳಿಕ ಇತ್ಯರ್ಥ ಒಪ್ಪಂದ ಮಾಡಿಕೊಂಡು 2024 ಜುಲೈ 31ರಂದು ಬಿಸಿಸಿಐಗೆ ರಿಜು ರವೀಂದ್ರನ್ ಬಾಕಿ ಹಣ ಪಾವತಿಸಿದ್ದರು.
ಬಿಸಿಸಿಐ ಮನವಿಯಂತೆ ದಿವಾಳಿ ಪ್ರಕ್ರಿಯೆ ಹಿಂಪಡೆಯಲು ಎನ್‌ಸಿಎಲ್ಎಟಿ 2024 ಜುಲೈ 31ರಂದು ಅನುಮತಿ ನೀಡಿತ್ತು. ಆದರೆ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಸಾಲಗಾರರ ಸಮಿತಿ ರಚನೆ ಬಳಿಕ ಇತ್ಯರ್ಥ ಒಪ್ಪಂದ ನಡೆದಿದೆ. ಹಾಗಾಗಿ ದಿವಾಳಿ ಪ್ರಕ್ರಿಯೆ ಹಿಂಪಡೆಯುವ ಒಪ್ಪಂದಕ್ಕೆ ಸಮಿತಿಯ ಅನುಮತಿ ಅಗತ್ಯ ಎಂದು ಎಸಿಎಲ್‌ಟಿ ನೀಡಿದ್ದ ಆದೇಶವನ್ನು ಎನ್‌ಸಿಎಲ್ಎಟಿ ಎತ್ತಿಹಿಡಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.