ADVERTISEMENT

ಮಹಾರಾಷ್ಟ್ರ ರಾಜಕೀಯ| ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 5:21 IST
Last Updated 26 ನವೆಂಬರ್ 2019, 5:21 IST
   

ದೆಹಲಿ: ಮಹಾರಾಷ್ಟ್ರದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಏಕಾಏಕಿ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತುಸರ್ಕಾರ ರಚನೆ ಮಾಡಲು ಬಿಜೆಪಿ ಅವಕಾಶ ನೀಡಿದ ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ನಾಳೆಗೆ (ನ.26) ಆದೇಶವನ್ನು ಕಾದಿರಿಸಿದೆ.

ಮಂಗಳವಾರ 10.30ಕ್ಕೆ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್‌.ವಿ ರಮಣ, ಅಶೋಕ್‌ ಭೂಷಣ್‌ ಮತ್ತು ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತಿಳಿಸಿತು.

ಇದಕ್ಕೂ ಮುನ್ನ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪರ ವಕೀಲರು ವಾದ ಪ್ರತಿವಾದಗಳನ್ನು ಮಂಡಿಸಿದರು.

ADVERTISEMENT

ಹಿರಿಯ ವಕೀಲ ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಪರವಾಗಿ, ಮಾಜಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಫಡಣವೀಸ್‌ಪರ ವಾದಿಸಿದರು.ಅಜಿತ್ ಪವಾರ್ ಪರವಾಗಿ ವಕೀಲ ಮಣಿಂದರ್ ಸಿಂಗ್ ವಾದ ಮಂಡನೆ ಮಾಡಿದರು. ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಪರವಾಗಿ ತುಷಾರ್ ಮೆಹ್ತಾ ವಾದಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಕೀಲರ ಮಂಡಿಸದ ವಾದವೇನು?ಓದಲು ಕ್ಲಿಕ್‌ ಮಾಡಿ:Live ಮಹಾರಾಷ್ಟ್ರ ರಾಜಕೀಯ

ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿಯು ಶಿವಸೇನೆ ಮೈತ್ರಿಯೊಂದಿಗೆ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿತ್ತಾದರೂ, ಸೇನಾದ ಅನಿರೀಕ್ಷಿತ ನಡೆಯಿಂದಾಗಿ ಸರ್ಕಾರ ರಚನೆ ಮಾಡಲು ವಿಫಲವಾಗಿತ್ತು. ನಂತರ, ಮೂರೂ ಪಕ್ಷಗಳು (ಬಿಜೆಪಿ, ಶಿವಸೇನೆ, ಎನ್‌ಸಿಪಿ) ಸರ್ಕಾರ ರಚನೆ ಮಾಡದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು.

ಹೀಗಾಗಿ, ಸರ್ಕಾರ ರಚನೆ ಮಾಡಲು ನಮಗೆ ಸೂಕ್ತ ಕಾಲವಕಾಶ ನೀಡಿಲ್ಲ ಎಂದು ಆರೋಪಿಸಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಈಗಾಗಲೇ ಸುಪ್ರೀಂ ಕೋರ್ಟ್‌ ಮೊರೆ ಹೋಗಿವೆ.

ಈ ನಡುವೆಯೇ ಶನಿವಾರ (ನ.23) ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಎನ್‌ಸಿಪಿಯ ಒಂದು ಬಣದ ಶಾಸಕರೊಂದಿಗೆ ಸರ್ಕಾರ ರಚನೆ ಮಾಡಿ ತಾವು ಮುಖ್ಯಮಂತ್ರಿಯಾಗಿದ್ದಾರೆ. ಎನ್‌ಸಿಪಿಯ ಅಜಿತ್‌ ಪವಾರ್‌ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ರಾಜ್ಯದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಡಳಿತವನ್ನು ದೀಢರ್‌ ಅಂತ್ಯಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಮತ್ತು ಆತುರಾತುರವಾಗಿ ದೇವೇಂದ್ರ ಫಡಣವೀಸ್‌ ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲರ ನಡೆಯನ್ನು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿವೆ.

ನಾಳಿನ ತೀರ್ಪು ಮಹಾರಾಷ್ಟ್ರ ರಾಜಕೀಯವನ್ನು ಮತ್ತಷ್ಟೂ ಕೌತುಕಭರಿತವಾಗಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.