ADVERTISEMENT

‘ನಿಗದಿತ ಗುರಿಯ ಜನಸಂಖ್ಯೆ ತಲುಪಲು ಕೋವಿಡ್ ಲಸಿಕೆ ಆಂದೋಲನಕ್ಕೆ ಚಾಲನೆ ಅಗತ್ಯ’

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿಕೆ

ಪಿಟಿಐ
Published 19 ಡಿಸೆಂಬರ್ 2020, 13:31 IST
Last Updated 19 ಡಿಸೆಂಬರ್ 2020, 13:31 IST
ಹರ್ಷವರ್ಧನ್
ಹರ್ಷವರ್ಧನ್   

ನವದೆಹಲಿ: ‘ದೇಶದ 30 ಕೋಟಿ ಜನರಿಗೆ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಕೋವಿಡ್ ಲಸಿಕೆಯನ್ನು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡುವುದು ಅತ್ಯಗತ್ಯವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶನಿವಾರ ಹೇಳಿದ್ದಾರೆ.

ಕೋವಿಡ್‌–19ಕುರಿತು ಉನ್ನತ ಮಟ್ಟದ ಸಚಿವರೊಂದಿಗೆ ನಡೆದ 22ನೇ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಭಾರತದಲ್ಲಿ ಕೋವಿಡ್‌–19 ಸಾಂಕ್ರಾಮಿಕ ಅಭಿವೃದ್ಧಿಯ ಪ್ರಮಾಣ ಶೇ 2ಕ್ಕೆ ಇಳಿದಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಾವನ್ನಪ್ಪುತ್ತಿರುವವ ಪ್ರಮಾಣವು ಶೇ 1.45ರಷ್ಟಿದೆ. ಚೇತರಿಕೆಯ ಪ್ರಮಾಣವು ಶೇ 95.46 ಇದೆ’ ಎಂದರು.

ಭಾರತದಲ್ಲಿ ಶನಿವಾರ ಕೋವಿಡ್‌–19 ಪ್ರಕರಣಗಳ ಒಟ್ಟು ಸಂಖ್ಯೆ ಒಂದು ಕೋಟಿ ದಾಟಿದೆ.

ADVERTISEMENT

‘ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹಬ್ಬಗಳ ಹೊರತಾಗಿಯೂ ಸಮಗ್ರ ಪರೀಕ್ಷೆ, ಟ್ರ್ಯಾಕಿಂಗ್ ಮತ್ತು ಚಿಕಿತ್ಸೆ ಕಾರಣಕ್ಕಾಗಿ ಪ್ರಕರಣಗಳು ಉಲ್ಬಣವಾಗಿಲ್ಲ. ಹಾಗೆಂದ ಮಾತ್ರಕ್ಕೆ ಜನರು ನಿರ್ಲಕ್ಷ್ಯ ತೋರದೇ ಕೋವಿಡ್‌–19ಗೆ ಸಂಬಂಧಿಸಿದಂತೆ ಸೂಕ್ತ ನಿಯಮ–ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು’ ಎಂದು ಹರ್ಷವರ್ಧನ್ ಮನವಿ ಮಾಡಿದರು.

‘ದೇಶದಲ್ಲಿ ಅಂದಾಜು 30 ಕೋಟಿ ಜನರಿಗೆ ಕೋವಿಡ್ ಲಸಿಕೆ ಚುಚ್ಚುಮದ್ದು ಹಾಕುವ ಗುರಿ ಹೊಂದಲಾಗಿದ್ದು, ಇಷ್ಟು ಪ್ರಮಾಣದಲ್ಲಿ ಲಸಿಕೆ ನೀಡಬೇಕಾದರೆ ಶೀಘ್ರಗತಿಯಲ್ಲೇ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವುದು ಅಗತ್ಯ’ ಎಂದು ಹರ್ಷವರ್ಧನ್ ಪ್ರತಿಪಾದಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್, ನಾಗರಿಕ ವಿಮಾನಯಾನ ಸಚವಿ ಹರ್ದೀಪ್ ಎಸ್. ಪುರಿ, ರಾಜ್ಯ ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ, ಗೃಹಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.