ADVERTISEMENT

ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವ ಅಗತ್ಯವಿದೆ: ದುಮ್ಕಾ ಘಟನೆಗೆ ರಾಹುಲ್

'ಬಾಲಕಿ ಮೇಲೆ ನಡೆದಿರುವ ಈ ಕ್ರೌರ್ಯವು ಪ್ರತಿಯೊಬ್ಬ ಭಾರತೀಯನನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ'

ಪಿಟಿಐ
Published 30 ಆಗಸ್ಟ್ 2022, 9:36 IST
Last Updated 30 ಆಗಸ್ಟ್ 2022, 9:36 IST
ರಾಹುಲ್ ಗಾಂಧಿ: ಪಿಟಿಐ ಚಿತ್ರ
ರಾಹುಲ್ ಗಾಂಧಿ: ಪಿಟಿಐ ಚಿತ್ರ   

ನವದೆಹಲಿ: ವ್ಯಕ್ತಿಯೊಬ್ಬ ಹಚ್ಚಿದ ಬೆಂಕಿಯಿಂದ ತೀವ್ರ ಗಾಯಗೊಂಡು ಮೃತಪಟ್ಟ ಜಾರ್ಖಂಡ್‌ನ ಬಾಲಕಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಇಂತಹ ಕ್ರೂರ ಕೃತ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಆ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ದೇಶದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಬೇಕಾದ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ.

ADVERTISEMENT

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್, ಹದಿಹರೆಯದ ಬಾಲಕಿ ಮೇಲೆ ನಡೆದಿರುವ ಈ ಕ್ರೌರ್ಯವು ಪ್ರತಿಯೊಬ್ಬ ಭಾರತೀಯನನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಬಾಲಕಿಯ ಸಂಬಂಧಿಕರಿಗೆ ಜಾರ್ಖಂಡ್ ಸರ್ಕಾರ ಸೋಮವಾರ ₹ 9 ಲಕ್ಷ ಪರಿಹಾರವನ್ನು ಹಸ್ತಾಂತರಿಸಿದೆ.

ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿನಿ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟರು.

ಪ್ರಕರಣ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡುವಂತೆ ಜಾರ್ಖಂಡ್ ಪೊಲೀಸರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಕೇಳಿದೆ.

ಆಗಸ್ಟ್ 23 ರಂದು ದುಮ್ಕಾ ಪಟ್ಟಣದಲ್ಲಿ ಈ ಕ್ರೂರ ಘಟನೆ ನಡೆದಿದೆ. ಆರೋಪಿಯನ್ನು ಶಾರುಖ್ ಎಂದು ಗುರುತಿಸಲಾಗಿದ್ದು, ಹದಿಹರೆಯದ ಬಾಲಕಿ ಮಲಗಿದ್ದ ಕೋಣೆಯ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೇಕಡ 90 ರಷ್ಟು ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಮೊದಲು ದುಮ್ಕಾದ ಫುಲೋ ಜಾನೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮತ್ತೊಂದಕ್ಕೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.