ADVERTISEMENT

ನೀಟ್‌–ಪಿಜಿ ಮುಂದೂಡಲು ಸುಪ್ರೀಂಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 14:42 IST
Last Updated 27 ಫೆಬ್ರುವರಿ 2023, 14:42 IST
   

ನವದೆಹಲಿ (ಪಿಟಿಐ): ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮಾರ್ಚ್‌ 5ಕ್ಕೆ ನಿಗದಿಯಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌–ಪಿಜಿ) ಮುಂದೂಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ನೀಟ್‌–ಪಿಜಿ ಪ್ರವೇಶ ಪರೀಕ್ಷೆ ದಿನಾಂಕವನ್ನು ಮುಂದೂಡುವಂತೆ ಕೋರಿ ಇಬ್ಬರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಸಾಕಷ್ಟು ಸಮಯ ದೊರಕಿಲ್ಲ. ವೃತ್ತಿ ತರಬೇತಿ (ಇಂಟರ್ನ್‌ಶಿಪ್‌) ದಿನಾಂಕವನ್ನು ಆಗಸ್ಟ್‌ 11ರವರೆಗೆ ನಿಗದಿ ಮಾಡಿರುವುದರಿಂದ ಕೌನ್ಸಿಲಿಂಗ್‌ ಪ್ರಕ್ರಿಯೆಯನ್ನು ಆಗಸ್ಟ್‌ 11ರ ನಂತರ ನಡೆಸಬೇಕು ಎಂದು ಅವರು ಕೋರಿದ್ದರು. ಪ್ರತಿ ರಾಜ್ಯಗಳು ಪ್ರತ್ಯೇಕ ಇಂಟರ್ನ್‌ಶಿಪ್‌ ಅವಧಿಯನ್ನು ಜಾರಿ ಮಾಡಿರುವುದರಿಂದ ಈ ಸಮಸ್ಯೆಗಳು ಉದ್ಭವಿಸಿವೆ ಎಂದು ಅರ್ಜಿಯಲ್ಲಿ ನಮೂದಿಸಿದ್ದರು.

ನಿಗದಿಪಡಿಸಿದ್ದ ವೇಳಾಪಟ್ಟಿಯಂತೆ ಅಭ್ಯರ್ಥಿಗಳಿಗೆ ಪ್ರವೇಶ ಪ‌ತ್ರ ವಿತರಿಸಲಾಗಿದೆ. ಜೂನ್ 15ರಿಂದ ಕೌನ್ಸಿಲಿಂಗ್‌ ಪ್ರಕ್ರಿಯೆ ಆರಂಭವಾಗಲಿದೆ. ಪ್ರವೇಶ ಪರೀಕ್ಷೆ ವೇಳಾಪಟ್ಟಿಯನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಹೊರಡಿಸಲಾಗಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯಾ ಭಾತಿ ಅವರು ನ್ಯಾಯಮೂರ್ತಿಗಳಾದ ಎಸ್‌.ಆರ್‌. ಭಟ್‌ ಮತ್ತು ದೀಪಾಂಕರ್‌ ದತ್ತ ಅವರಿದ್ದ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.