ADVERTISEMENT

NEET ಫಲಿತಾಂಶ ಪ್ರಕಟ: ರಾಜಸ್ಥಾನದ ಮಹೇಶ್, ಮಧ್ಯಪ್ರದೇಶದ ಉತ್ಕರ್ಷ್‌ ಟಾಪರ್ಸ್

ಪಿಟಿಐ
Published 14 ಜೂನ್ 2025, 10:33 IST
Last Updated 14 ಜೂನ್ 2025, 10:33 IST
ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ
ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ   

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NAT) ನಡೆಸುವ ನೀಟ್‌ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ರಾಜಸ್ಥಾನದ ಮಹೇಶ್ ಕುಮಾರ್‌ ಮೊದಲ ರ‍್ಯಾಂಕ್ ಪಡೆದರೆ, ಮಧ್ಯಪ್ರದೇಶದ ಉತ್ಕರ್ಷ ಅವಾಧಿಯಾ 2ನೇ ರ‍್ಯಾಂಕ್ ಪಡೆದಿದ್ದಾರೆ. 

ಈ ವರ್ಷ 22.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ 12.36 ಲಕ್ಷ ಅಭ್ಯರ್ಥಿಗಳು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ವರ್ಷ ಕಡಿಮೆ ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ 23.33 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು. 13.15 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದರು. 

ಮಹಾರಾಷ್ಟ್ರದ ಕೃಷಾಂಗ್ ಜೋಶಿ, ದೆಹಲಿಯ ಮೃಣಾಲ್‌ ಕಿಶೋರ್ ಜಾ ಕ್ರಮವಾಗಿ 3 ಹಾಗೂ 4ನೇ ರ‍್ಯಾಂಕ್ ಪಡೆದಿದ್ದಾರೆ.

ADVERTISEMENT

ಮಹಿಳೆಯರಲ್ಲಿ ದೆಹಲಿಯ ಅವಿಕಾ ಅಗರವಾಲ್‌ ಟಾಪರ್‌ ಆಗಿದ್ದಾರೆ. ಇವರು ರಾಷ್ಟ್ರಮಟ್ಟದಲ್ಲಿ 5ನೇ ರ‍್ಯಾಂಕ್ ಪಡೆದಿದ್ದಾರೆ.

ನೀಟ್ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ (1.70 ಲಕ್ಷ) ಅರ್ಹತೆ ಪಡೆದಿದ್ದಾರೆ. ಮಹಾರಾಷ್ಟ್ರದ 1.25 ಲಕ್ಷ ಮತ್ತು ರಾಜಸ್ಥಾನದ 1.19 ಲಕ್ಷ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಹರಾಗಿದ್ದಾರೆ. 

ದೇಶದಲ್ಲಿ ಒಟ್ಟು 1.08 ಲಕ್ಷ ವೈದ್ಯಕೀಯ ಸೀಟುಗಳಿವೆ. ಇದರಲ್ಲಿ 56 ಸಾವಿರ ಸರ್ಕಾರಿ ಮತ್ತು 52 ಸಾವಿರ ಖಾಸಗಿ ಕಾಲೇಜುಗಳಲ್ಲಿ ಸೀಟುಗಳು ಲಭ್ಯ. ಇದರೊಂದಿಗೆ ದಂತ ವೈದ್ಯಕೀಯ, ಆಯುರ್ವೇದ, ಉನಾನಿ, ಸಿದ್ಧ ಕೋರ್ಸ್‌ಗಳನ್ನು ಸೇರಲು ನೀಟ್ ಪರೀಕ್ಷೆ ಪಾಸಾಗಿ ಅರ್ಹತೆ ಗಿಟ್ಟಿಸಿಕೊಳ್ಳುವುದು ಕಡ್ಡಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.