ADVERTISEMENT

ಆನ್‌ಲೈನ್‌ ಮೂಲಕ NEET ಪರೀಕ್ಷೆ?: ಶೀಘ್ರ ನಿರ್ಧಾರ ಎಂದ ಸಚಿವ ಪ್ರಧಾನ್

ಪಿಟಿಐ
Published 17 ಡಿಸೆಂಬರ್ 2024, 10:30 IST
Last Updated 17 ಡಿಸೆಂಬರ್ 2024, 10:30 IST
<div class="paragraphs"><p>ಸಚಿವ ಧರ್ಮೇಂದ್ರ ಪ್ರಧಾನ್‌</p></div>

ಸಚಿವ ಧರ್ಮೇಂದ್ರ ಪ್ರಧಾನ್‌

   

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌–ಯುಜಿ ಅನ್ನು ಆನ್‌ಲೈನ್‌ ಮೂಲಕ ಮಾಡಬೇಕೆ ಅಥವಾ ಭೌತಿಕ ರೂಪದಲ್ಲೇ ಇರಬೇಕೆ ಎನ್ನುವುದು ಶೀಘ್ರದಲ್ಲೇ ನಿರ್ಧಾರವಾಗಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಮಂಗಳವಾರ ಹೇಳಿದ್ದಾರೆ.

ಯಾವ ಮಾದರಿಯ ಪರೀಕ್ಷೆ ಉತ್ತಮ ಎನ್ನುವುದರ ಬಗ್ಗೆ ಜೆ.ಪಿ. ನಡ್ಡಾ ನೇತೃತ್ವದ ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಎರಡು ಸುತ್ತಿನ ಮಾತುಕತೆ ನಡೆದಿದೆ. ಎನ್‌ಟಿಎ ಕೂಡ ಈ ಪ್ರಯೋಗಕ್ಕೆ ಸಿದ್ಧವಿದೆ. ಸದ್ಯ ನೀಟ್‌–ಯುಜಿ ಪರೀಕ್ಷೆಯನ್ನು  ಒಎಮ್‌ಆರ್‌ ಶೀಟ್‌ ಭರ್ತಿ ಮಾಡುವ ಮೂಲಕ ಆಫ್‌ಲೈನ್‌ ಅಂದರೆ ಭೌತಿಕ ರೂಪದಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಭವಿಷ್ಯದಲ್ಲಿ ಈ ಪರೀಕ್ಷೆ ಹೇಗೆ ನಡೆಸಬೇಕು ಎಂಬುದರ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು. ಪರಿಷ್ಕೃತ ಪರೀಕ್ಷಾ ಮಾದರಿ 2025ರಲ್ಲಿ ಜಾರಿಗೆ ಬರಲಿದೆ. ಈ ಬಗ್ಗೆ ಆದಷ್ಟು ಬೇಗ ತಿಳಿಸಲಾಗುವುದು’ ಎಂದು ಪ್ರಧಾನ್‌ ಹೇಳಿದ್ದಾರೆ.

ನೀಟ್‌ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸುವ ಕುರಿತಾದ ಚರ್ಚೆ ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೆಚ್ಚಾಗಿರುವ ಕಾರಣ ಮತ್ತೆ ಮುನ್ನೆಲೆಗೆ ಬಂದಿದೆ. 

‘ಕೆಲ ತರಗತಿಗಳ ಪಠ್ಯಪುಸ್ತಕ ಬೆಲೆ ಕಡಿತ’

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ)ಯ ಕೆಲ ತರಗತಿಗಳ ಪಠ್ಯಪುಸ್ತಕಗಳ ಬೆಲೆಯನ್ನು ಕಡಿತಗೊಳಿಸಲಾಗುತ್ತಿದ್ದು ಮುಂದಿನ ವರ್ಷದಿಂದ ಇದು ಅನ್ವಯವಾಗಲಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಎನ್‌ಸಿಇಆರ್‌ಟಿ ಪ್ರಸ್ತುತ ವರ್ಷಕ್ಕೆ 5 ಕೋಟಿ ಪಠ್ಯಪುಸ್ತಕಗಳನ್ನು ಮುದ್ರಿಸುತ್ತಿದೆ. ಮುಂದಿನ ವರ್ಷದಿಂದ 15 ಕೋಟಿ ಪಠ್ಯಪುಸ್ತಕಗಳನ್ನು ಮುದ್ರಿಸಲು ಸಾಧ್ಯವಾಗುವಂತೆ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಕೆಲ ತರಗತಿಗಳ ಪಠ್ಯಪುಸ್ತಕಗಳನ್ನು ಅಧಿಕ ಪ್ರಮಾಣದಲ್ಲಿ ಮುದ್ರಿಸಲಾಗುತ್ತಿದ್ದರೆ ಕೆಲ ತರಗತಿಗಳ ಪಠ್ಯಪುಸ್ತಕಗಳ ಬೆಲೆಗಳನ್ನು ಕಡಿತಗೊಳಿಸಲಾಗುತ್ತದೆ. ಆದರೆ ಪಾಲಕರ ಮೇಲೆ ಹಣಕಾಸಿನ ಹೊರೆ ಆಗಬಾರದು ಎಂಬ ದೃಷ್ಟಿಯಿಂದ ಯಾವುದೇ ತರಗತಿಯ ಪಠ್ಯಪುಸ್ತಕಗಳ ಬೆಲೆಗಳನ್ನು ಹೆಚ್ಚಳ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ನೂತನ ಪಠ್ಯಕ್ರಮದ ಅನ್ವಯ ಸಿದ್ಧಪಡಿಸಲಾಗುತ್ತಿರುವ 9 ರಿಂದ 12ನೇ ತರಗತಿ ವರೆಗಿನ ಪಠ್ಯಪುಸ್ತಕಗಳು 2026–27ನೇ ಶೈಕ್ಷಣಿಕ ವರ್ಷದಿಂದ ಲಭ್ಯವಾಗಲಿವೆ ಎಂದೂ ಅವರು ತಿಳಿಸಿದ್ಧಾರೆ.

‘ಇನ್ನು ಮುಂದೆ ಎನ್‌ಟಿಎ ನೇಮಕಾತಿ ಪರೀಕ್ಷೆ ನಡೆಸದು’

ಮುಂದಿನ ವರ್ಷದಿಂದ ರಾಷ್ಡ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳನ್ನು ಮಾತ್ರ ನಡೆಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಮುಂದಿನ ವರ್ಷ ಎನ್‌ಟಿಎ ಅನ್ನು ಪುನರ್‌ರಚಿಸಲಾಗುವುದು. ಕನಿಷ್ಠ 10 ಹೊಸ ಹುದ್ದೆಗಳನ್ನು ಸೃಜಿಸಲಾಗುವುದಲ್ಲದೇ ಅದು ಎಳ್ಳಷ್ಟೂ ದೋಷವಿಲ್ಲದಂತೆ ಪರೀಕ್ಷೆ ನಡೆಸುವುದಕ್ಕೆ ಅನುವಾಗುವಂತೆ ಅದರ ಕಾರ್ಯವೈಖರಿಯಲ್ಲಿಯೂ ಬದಲಾವಣೆ ಮಾಡಲಾಗುವುದು ಎಂದಿದ್ದಾರೆ. ‘ಸಿಯುಇಟಿ–ಯುಜಿ ಅನ್ನು ವರ್ಷದಲ್ಲಿ ಒಂದು ಬಾರಿ ಮಾತ್ರ ನಡೆಸಲಾಗುವುದು’ ಎಂದೂ ಪ್ರಧಾನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.