
ನೆಮಿಸಿಯೊ ಒಸೆಗುರಾ
ಕೃಪೆ: ಎಕ್ಸ್
ಮೆಕ್ಸಿಕನ್ ಡ್ರಗ್ ಲಾರ್ಡ್ ಎಂದೇ ಖ್ಯಾತಿ ಪಡೆದ ನೆಮಿಸಿಯೊ ಒಸೆಗುರಾ ಅವರನ್ನು ಜಲಿಸ್ಕೊದಲ್ಲಿ ಮೆಕ್ಸಿಕೊದ ಮಿಲಿಟರಿ ಪಡೆಗಳು ಹತ್ಯೆಗೈದಿವೆ. ಒಸೆಗುರಾ ಇಲ್ಲಿನ ಮೋಸ್ಟ್ ವಾಂಟೆಡ್ ಮಾದಕ ವಸ್ತು ಮಾರಾಟಗಾರ ಎಂಬ ಕುಖ್ಯಾತಿ ಪಡೆದಿದ್ದನು. ಈ ಒಸೆಗುರಾ ಯಾರು? ಅವನ ಹತ್ಯೆಗೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.
1966ರಲ್ಲಿ ಮೆಕ್ಸಿಕೊದ ಪಶ್ಚಿಮ ರಾಜ್ಯ ಅಗಿಲೀಲಾದಲ್ಲಿ ಒಸೆಗುರಾ ಜನಿಸಿದನು. 1990ರ ದಶಕದಲ್ಲಿ ಮಾದಕವಸ್ತು ವ್ಯಾಪಾರ ಮತ್ತು ಕಳ್ಳಸಾಗಣಿಕೆಯಲ್ಲಿ ಭಾಗಿಯಾದ ಒಸೆಗುರಾ ಬಹುಬೇಗನೆ ಮಾದಕ ವಸ್ತುಗಳ ಮಾರಾಟದಲ್ಲಿ ಗುರುತಿಸಿಕೊಂಡನು. ಬಳಿಕ ಅಮೆರಿಕಕ್ಕೆ ತೆರಳಿದ ಒಸೆಗುರಾ 1994ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಹೆರಾಯಿನ್ ಆಕ್ರಮ ಸಾಗಾಣಿಕೆಯ ಪಿತೂರಿ ನಡೆಸಿದ್ದಕ್ಕಾಗಿ ಶಿಕ್ಷೆಗೊಳಗಾದನು. ಅಲ್ಲಿನ ನ್ಯಾಯಾಲಯ ಒಸೆಗುರಾನನ್ನು ಮೆಕ್ಸಿಕೊಕ್ಕೆ ಗಡಿಪಾರು ಮಾಡಿತು ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ. ಈತ ಮಾಜಿ ಪೊಲೀಸ್ ಅಧಿಕಾರಿಯೂ ಆಗಿದ್ದನು.
ಮೆಕ್ಸಿಕನ್ ಸೈನ್ಯದ ಪ್ರಕಾರ, ಜಲಿಸ್ಕೊದ ಟಪಲ್ಟಾ ಪಟ್ಟಣದಲ್ಲಿ ಸೈನಿಕರೊಂದಿಗೆ ನಡೆದ ಘರ್ಷಣೆಯ ಸಮಯದಲ್ಲಿ ಒಸೆಗುರಾ ಗಾಯಗೊಂಡನು. ನಂತರ ಅವನನ್ನು ವಿಮಾನದಲ್ಲಿ ಮೆಕ್ಸಿಕೊ ನಗರಕ್ಕೆ ಸಾಗಿಸುವಾಗ ಸಾವನ್ನಪ್ಪಿದ್ದನು. ಇವನನ್ನು ಸೆರೆಯಿಡಿದವರಿಗೆ ₹124.5 ಕೋಟಿ ಬಹುಮಾನವನ್ನು ಘೋಷಿಸಿತ್ತು ಎಂದು ವರದಿಯಾಗಿದೆ.
ಸಿಜೆಎನ್‌ಜಿ ನಾಯಕ ಒಸೆಗುರಾ
ಗಡಿಪಾರಿನ ನಂತರ ಮೆಕ್ಸಿಕೊದಲ್ಲಿ ನೆಲೆಸಿದ ಒಸೆಗುರಾ ಆ ಸಮಯದಲ್ಲಿ ಸಿನಾಲೋವಾ ಕಾರ್ಟೆಲ್ ಸಂಘಟನೆಯ ಹಿರಿಯ ಡ್ರಗ್ ಪೆಡ್ಲರ್ ನ್ಯಾಚೊ ಕರೋನಲ್ ಎಂದೇ ಖ್ಯಾತಿಯಾದ ಇಗ್ನಾಸಿಯೊ ಕರೋನಲ್ ವಿಲ್ದಾರಿಯಲ್ ಜೊತೆಗೆ ಸಂಪರ್ಕ ಸಾಧಿಸಿದನು. ನಂತರ ಇಬ್ಬರು ಒಟ್ಟಾಗಿ ಮಾದಕವಸ್ತು ಕಳ್ಳಸಾಗಣೆಯನ್ನು ಮತ್ತೆ ಆರಂಭಿಸಿದ್ದರು. ಕರೋನಲ್ ಮರಣದ ನಂತರ, ಒಸೆಗುರಾ 2009 ರಲ್ಲಿ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‌ಜಿ) ಎಂಬ ಸಂಘಟನೆಯನ್ನು ಸ್ಥಾಪಿಸಿದರು ಎಂದು ವರದಿಯಾಗಿದೆ.
ಸಿಜೆಎನ್‌ಜಿ ಎಂದರೇನು?
ವಿಶ್ವದ ಅಪಾಯಕಾರಿ ಕ್ರಿಮಿನಲ್ ಸಂಘಟನೆಗಳಲ್ಲಿ ಸಿಜೆಎನ್‌ಜಿ ಒಂದಾಗಿದೆ. ಇದು ಮೆಕ್ಸಿಕೊದಲ್ಲಿ 2009ರಲ್ಲಿ ರಚನೆಯಾಯಿತು. ಈ ಸಂಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳಿಗೆ ಕೊಕೇನ್, ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಸರಬರಾಜು ಮಾಡುತ್ತದೆ ಎಂಬ ಆರೋಪಗಳಿವೆ. ಆರಂಭದಲ್ಲಿ ಮೆಕ್ಸಿಕೊಕ್ಕೆ ಮಾತ್ರ ಸಿಮೀತವಾಗಿದ್ದ ಇದರ ಜಾಲ ನಂತರದ ದಿನಗಳಲ್ಲಿ ಅಮೆರಿಕಕ್ಕೂ ವ್ಯಾಪಿಸಿತು. ಇಂದು ಈ ಸಂಘಟನೆ ಅಮೆರಿಕಾದಲ್ಲಿ ಹೆಚ್ಚಿನ ಮಟ್ಟದ ಡ್ರಗ್ ಜಾಲವನ್ನು ಹೊಂದಿದೆ ಎಂಬ ಅರೋಪಗಳಿವೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಒಸೆಗುರಾ ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‌ಜಿ) ಸ್ಥಾಪಕ ಮತ್ತು ಮುಖ್ಯಸ್ತರಾಗಿದ್ದರು, ಇದು ಕೊಕೇನ್, ಮೆಥಾಂಫಟಮೈನ್ ಮತ್ತು ಫಂಟನಿಲ್ ಅನ್ನು ಅಮೆರಿಕಕ್ಕೆ ಕಳ್ಳಸಾಗಾಣಿಕೆ ಮಾಡುವ ಸಂಘಟನೆಯಾಗಿದೆ. ಈ ಸಂಘಟನೆ ಆಸ್ಟ್ರೇಲಿಯಾ, ಕೆನಡಾ, ಯುರೋಪ್, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಗೂ ಮಾದಕ ವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದೆ ಎಂದು ಅಮೆರಿಕಾದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ತಿಳಿಸಿದೆ.
ಸರ್ಕಾರಿ ಅಧಿಕಾರಿಗಳ ಹತ್ಯೆ
ಒಸೆಗುರಾ ಮೇಲೆ ಹಲವು ಕೊಲೆ ಪ್ರಕರಣಗಳು ದಾಖಲಾಗಿವೆ. ಮೆಕ್ಸಿಕೊದಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ತಡೆಯಲು ಬಂದ ಅಧಿಕಾರಿಗಳನ್ನು ಹತ್ಯೆ ಮಾಡಿರುವ ಆರೋಪಗಳೂ ಇವೆ. ಈ ಸಂಘಟನೆಯ ಸದಸ್ಯರಿಂದ ಹಲವು ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಅಮೆರಿಕಾದ ನ್ಯಾಯಾಲಯ ಹೇಳಿದೆ.
ವಿಮಾನ ನಿಲ್ದಾಣಗಳಲ್ಲಿ ದಾಳಿ
ಒಸೆಗುರಾ ಹತ್ಯೆ ಬಳಿಕ ಮೆಕ್ಸಿಕೊದ ಕೆಲವು ಭಾಗಗಳಲ್ಲಿ ಹಿಂಸಚಾರ ಭುಗಿಲೆದ್ದಿದೆ. ಮೆಕ್ಸಿಕನ್ ವಿಮಾನ ನಿಲ್ದಾಣಗಳಲ್ಲಿ ದಾಳಿಗಳು ಶುರುವಾಗಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಶಂಕಿತ ಸಂಘಟನೆಯ ಸದಸ್ಯರು ಬಸ್‌ಗಳು ಮತ್ತು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆಗಳನ್ನು ತಡೆದರು ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದಾರೆ. ಪ್ರವಾಸಿ ತಾಣವಾದ ಪೋರ್ಟೊ ವಲ್ಲರ್ಟಾದಲ್ಲಿ ಬೆಂಕಿ ಮತ್ತು ಹೊಗೆಯ ವಿಡಿಯೊಗಳು ಹರಿದಾಡುತ್ತಿವೆ. ಪರಿಸ್ಥಿತಿ ಹದಗೆಟ್ಟಂತೆ ಏರ್ ಕೆನಡಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.