ADVERTISEMENT

ಗಡಿಗೆ ಸಂಬಂಧಿಸಿದಂತೆ ನೇಪಾಳದ ಎಫ್‌.ಎಂ ವಾಹಿನಿಗಳಿಂದ ಭಾರತದ ವಿರುದ್ಧ ಅಪಪ್ರಚಾರ

ಪಿಟಿಐ
Published 9 ಜುಲೈ 2020, 2:46 IST
Last Updated 9 ಜುಲೈ 2020, 2:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಿಥೋರಾಗಡ (ಉತ್ತರಾಖಂಡ): ಭಾರತದ ಗಡಿಗೆ ಹೊಂದಿಕೊಂಡಿರುವ ಭಾಗಗಳಲ್ಲಿ ನೇಪಾಳದ ಎಫ್.ಎಂ ರೇಡಿಯೊ ವಾಹಿನಿಗಳು ಭೂ ಪ್ರದೇಶ ಕುರಿತಂತೆ ನೇಪಾಳ ಸರ್ಕಾರದ ಪ್ರತಿಪಾದನೆಯನ್ನು ಬೆಂಬಲಿಸುವಂತೆ ಅಪಪ್ರಚಾರ ಮಾಡುತ್ತಿವೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.

ಕಾಲಾಪಾನಿ, ಲಿಪುಲೇಖ್‌, ಲಿಂಪಿಯಾಧೂರಾ ಪ್ರದೇಶಗಳು ತನಗೆ ಸೇರಿವೆ ಎಂದು ನೇಪಾಳ ಪ್ರತಿಪಾದಿಸುತ್ತಿದ್ದು, ಇದನ್ನೇ ಬೆಂಬಲಿಸುವಂತೆ ರೇಡಿಯೊದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂಬುದು ಸ್ಥಳೀಯರ ಆರೋಪ.

ಕೆಲ ಎಫ್‌ಎಂ ವಾಹಿನಿಗಳು ನೇಪಾಳಿ ಗೀತೆಗಳ ನಡುವೆ ಭಾರತ ವಿರೋಧಿ ಭಾಷಣಗಳನ್ನೂ ಪ್ರಸಾರ ಮಾಡುತ್ತಿವೆ ಎಂದು ಪಿಥೋರಾಗಡದ ದಂತು ಗ್ರಾಮದ ನಿವಾಸಿ ಶಾಲು ದಾತಾಳ್‌‌ ತಿಳಿಸಿದರು. ನಯಾ ನೇಪಾಳ್‌, ಕಾಲಾಪಾನಿ ರೇಡಿಯೊ, ದಾತಾಳ್‌ ವಾಹಿನಿಗಳು ಇಂಥ ಪ್ರಚಾರದಲ್ಲಿ ತೊಡಗಿವೆ ಎಂದು ಹೇಳಿದರು.

ADVERTISEMENT

ಗಡಿ ಭಾಗದಲ್ಲಿ ಉಭಯ ಕಡೆಯೂ ಈ ವಾಹಿನಿಗಳನ್ನು ಆಲಿಸುತ್ತಾರೆ. ಹೀಗಾಗಿ, ನೇಪಾಳಿ ರಾಜಕೀಯ ಮುಖಂಡರ ಭಾರತ ವಿರೋಧಿ ಹೇಳಿಕೆಗಳನ್ನು ಅವರು ಆಲಿಸಬೇಕಾಗಿದೆ ಎಂದು ಶಾಲು ದಾತಾಳ್‌ ತಿಳಿಸಿದರು.

ಕಾಲಾಪಾನಿ ಪ್ರದೇಶವು ನೇಪಾಳದ ಭಾಗ ಎಂಬಂತೆ ಮಲ್ಲಿಕಾರ್ಜುನ್‌ ರೇಡಿಯೊ ಮತ್ತು ಅನ್ನಪೂರ್ಣ ಆನ್‌ಲೈನ್‌ ವಾಹಿನಿಗಳು ಕೂಡಾ ಪ್ರಚಾರ ನಡೆಸುತ್ತಿವೆ ಎಂದು ಹೇಳಲಾಗಿದೆ. ಈ ವಾಹಿನಿಗಳ ಪ್ರಸಾರ ವ್ಯಾಪ್ತಿ ಸುಮಾರು 3 ಕಿ.ಮೀ ಆಗಿದ್ದು, ದಾರ್ಚುಲಾ, ಬಾಲುಆಕೋಟ್, ಜೌಲಿಬಿ ಭಾಗಗಳಲ್ಲಿ ಆಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.