ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ, ಅವರ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗುವುದು. ಇದು ನೇತಾಜಿ ಅವರಿಗೆ ಭಾರತ ಋಣಿಯಾಗಿರುವ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಗ್ರಾನೈಟ್ನಿಂದ ಕೆತ್ತಲಾಗುತ್ತಿರುವ ಪ್ರತಿಮೆ ಪೂರ್ಣಗೊಳ್ಳುವವರೆಗೆ ಅಲ್ಲಿ ನೇತಾಜಿ ಅವರಹೋಲೋಗ್ರಾಂ ಪ್ರತಿಮೆ ಇರಲಿದೆ. ಇದನ್ನುನೇತಾಜಿ ಅವರ ಜನ್ಮದಿನವಾದ ಜನವರಿ 23ರಂದು (ಭಾನುವಾರ) ಅನಾವರಣಗೊಳಿಸಲಿದ್ದೇನೆ’ ಎಂದೂ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಈ ನಿರ್ಧಾರವನ್ನು ಬಹುತೇಕ ವಿರೋಧ ಪಕ್ಷಗಳು ಸ್ವಾಗತಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇದು ಗಣರಾಜೋತ್ಸವದ ಪರೇಡ್ನಲ್ಲಿ ಪಶ್ಚಿಮ ಬಂಗಾಳಸರ್ಕಾರ ಪ್ರದರ್ಶಿಸಲು ಉದ್ದೇಶಿಸಿದ್ದ ಸ್ತಬ್ಧ ಚಿತ್ರ ತಿರಸ್ಕರಿಸಿದ್ದಕ್ಕೆ ವ್ಯಕ್ತವಾದ ಟೀಕೆಯನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮ’ ಎಂದು ಟೀಕಿಸಿದ್ದಾರೆ.
25 ಅಡಿ ಎತ್ತರದ ಪ್ರತಿಮೆ
ಭುವನೇಶ್ವರ: ರಾಜಧಾನಿಯ ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಿರುವ ನೇತಾಜಿ ಅವರ ಪ್ರತಿಮೆ 25 ಅಡಿ ಎತ್ತರ ಇರಲಿದೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನ (ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ)ವ್ಯವಸ್ಥಾಪಕ ನಿರ್ದೇಶಕ ಅದ್ವೈತ ಗದನಾಯಕ ಅವರು ತಿಳಿಸಿದ್ದಾರೆ.
‘ಪ್ರತಿಮೆ ರೂಪಿಸುವ ಜವಾಬ್ದಾರಿಯನ್ನುಪ್ರಧಾನಿ ಮೋದಿ ಅವರು ನನಗೆ ನೀಡಿದ್ದಾರೆ. ಒಬ್ಬ ಶಿಲ್ಪಿಯಾಗಿ ಇದು ನನಗೆ ಬಹಳ ಗೌರವದ ಸಂಗತಿ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
‘ರೈಸಿನಾ ಹಿಲ್ಸ್ನಿಂದ ಈ ಪ್ರತಿಮೆಯನ್ನು ಕಾಣುವಂತೆ ಅಳವಡಿಸಲಾಗುತ್ತದೆ. ನೇತಾಜಿ ಪ್ರತಿಮೆ ರೂಪಿಸಲು ಬಳಸುವ ಶಿಲೆಯನ್ನು ತೆಲಂಗಾಣದಿಂದ ತರಲಾಗುವುದು.ಪ್ರತಿಮೆಯ ವಿನ್ಯಾಸವನ್ನು ಸಂಸ್ಕೃತಿ ಸಚಿವಾಲಯ ಸಿದ್ಧಪಡಿಸಿದೆ. ಪ್ರತಿಮೆ ಸಿದ್ಧಪಡಿಸುವ ಕೆಲಸ ಈಗಾಗಲೇ ಆರಂಭವಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.