ADVERTISEMENT

ದೆಹಲಿ: ಕರ್ನಾಟಕ ಭವನದ ಸಿಬ್ಬಂದಿಗೆ‌ ಕೋವಿಡ್-19 ದೃಢ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 15:17 IST
Last Updated 13 ಜೂನ್ 2020, 15:17 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ–1ರಲ್ಲಿನ ಸಿಬ್ಬಂದಿಯೊಬ್ಬರಲ್ಲಿ ಶನಿವಾರ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

ರೂಮ್‌ ಬಾಯ್ ಕೆಲಸ ಮಾಡುವ 25 ವರ್ಷ ವಯಸ್ಸಿನ, ದೆಹಲಿ ಮೂಲದ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿದೆ.

ಜೂನ್ 8ರವರೆಗೆ ಕೆಲಸಕ್ಕೆ ಬಂದಿದ್ದ ಈ ವ್ಯಕ್ತಿ, ಜ್ವರದಿಂದ ಬಳಲಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪರೀಕ್ಷೆಗೆ ಒಳಪಟ್ಟಿದ್ದರು. ಶನಿವಾರ ಸೋಂಕು ಇರುವುದು ದೃಢಪಟ್ಟಿತು.

ADVERTISEMENT

ಕರ್ನಾಟಕ ಭವನ–1ರಲ್ಲಿ ಈ ವ್ಯಕ್ತಿ ಸೇವೆ ಸಲ್ಲಿಸಿದ್ದರಿಂದ ಇವರ ಸಂಪರ್ಕಕ್ಕೆ ಬಂದಿದ್ದ ಇತರ ಸ್ವಚ್ಛತಾ ಸಿಬ್ಬಂದಿ ಹಾಗೂ ಕಿಚನ್‌ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭವನದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಯಲ್ಲಿ ಅಲ್ಪ ಪ್ರಮಾಣದ ರೋಗ ಲಕ್ಷಣಗಳು ಇವೆ. ಹಾಗಾಗಿ ಭಾನುವಾರ ಆಸ್ಪತ್ರೆಯಿಂದ ಕಳುಹಿಸಿ ಮನೆಯಲ್ಲೇ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿ ಔಷಧಿ ತೆಗೆದುಕೊಳ್ಳುವಂತೆ ದೆಹಲಿ ಸರ್ಕಾರ ಸೂಚಿಸಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಇಲ್ಲಿ ಹೊಂದಿರುವ ಮೂರು ಭವನಗಳಲ್ಲೂ ಅಟೊಮೆಟೆಡ್ ಸ್ಯಾನಿಟೈಸರ್ ಸಾಧನ ಇರಿಸಲಾಗಿದ್ದು, ಕೊರೊನಾ ಸೋಂಕು ತಡೆಗೆ ಅಗತ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತ ವ್ಯಕ್ತಿ ಕೆಲಸ ಮಾಡಿರುವ ಭವನವನ್ನು ಸಂಪೂರ್ಣ ಸ್ವಚ್ಛಗೊಳಿಸಲು ನಿರ್ಧರಿಸಲಾಗದೆ ಎಂದು ಅವರು ವಿವರಿಸಿದ್ದಾರೆ.

ದೆಹಲಿಯ ನಿವಾಸಿಯಾಗಿರುವ ಈ ವ್ಯಕ್ತಿಗೆ ಮನೆಯ ಹತ್ತಿರದ ಇತರರ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊರೊನಾ ತಡೆ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಿಸಿದ ನಂತರ ಕರ್ನಾಟಕ ಭವನಗಳಿಗೆ ಅತಿಥಿಗಳು ಬಂದಿಲ್ಲ. ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.