ನವದೆಹಲಿಯಲ್ಲಿರುವ ಭಾರತೀಯ ಚುನಾವಣಾ ಆಯೋಗದ ಕಚೇರಿ
–ಪಿಟಿಐ ಚಿತ್ರ
ನವದೆಹಲಿ: ಚುನಾವಣೆಗೆ ಸಂಬಂಧಿಸಿದಂತೆ ಒಂದೇ ವೇದಿಕೆಯಲ್ಲಿ ಸಮಗ್ರ ಮಾಹಿತಿ ಹಾಗೂ ಸೇವೆ ಒದಗಿಸುವ ಹೊಸ ಕಿರು ತಂತ್ರಾಂಶ (ಆ್ಯಪ್) ಬಿಡುಗಡೆಗೊಳಿಸಲು ಭಾರತೀಯ ಚುನಾವಣಾ ಆಯೋಗವು ಸಿದ್ಧತೆ ನಡೆಸಿದೆ.
ಮತದಾರರು, ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿಗಳಿಗೆ ನೂತನ ಆ್ಯಪ್‌ನಲ್ಲಿ ಮಾಹಿತಿ ಸಿಗಲಿದ್ದು, ಈಗಿರುವ 40 ಮೊಬೈಲ್ ಅಪ್ಲಿಕೇಷನ್‌ಗಳು ಒಂದೇ ಆ್ಯಪ್‌ನಲ್ಲಿ ಸಂಯೋಜನೆಗೊಳ್ಳಲಿವೆ ಎಂದು ಆಯೋಗವು ತಿಳಿಸಿದೆ.
ಆಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸ ಮಾಡಲು ಪ್ರತ್ಯೇಕ ಆ್ಯಪ್ ಡೌನ್‌ಲೋಡ್ ಮಾಡಿ, ಲಾಗಿನ್ ಮಾಡಬೇಕಾದ ಅನಿವಾರ್ಯ ಇತ್ತು. ಈ ಸಮಸ್ಯೆ ಕೊನೆಗಾಣಿಸಲು, ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಇತ್ತೀಚಿಗೆ ತಿಳಿಸಿದ್ದರು.
‘ಇಸಿಐನೆಟ್’ ಆ್ಯಪ್ ಸ್ಮಾರ್ಟ್‌ಫೋನ್ ಜೊತೆಗೆ ಡೆಸ್ಕ್‌ಟಾಪ್‌ನಲ್ಲಿ ಲಭ್ಯವಾಗಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಅಧಿಕೃತ ಅಂಕಿಅಂಶಗಳನ್ನು ಆಯೋಗವೇ ಪರಿಷ್ಕರಿಸಲಿದ್ದು, ಸಾಧ್ಯವಾದಷ್ಟು ನಿಖರ ಮಾಹಿತಿಯನ್ನು ಪಡೆಯಬಹುದಾಗಿದೆ. ಸಮಸ್ಯೆ ಸೃಷ್ಟಿಯಾದರೆ, ಶಾಸನಬದ್ಧವಾದ ನಮೂನೆಗಳಲ್ಲಿ ಭರ್ತಿ ಮಾಡಿದ ಪ್ರಾಥಮಿಕ ದತ್ತಾಂಶಗಳೇ ಮಾನ್ಯವಾಗಿ ಇರಲಿವೆ ಎಂದು ಆಯೋಗವು ಸ್ಪಷ್ಟಪಡಿಸಿದೆ.
ಚುನಾವಣೆಗೆ ಸಂಬಂಧಿಸಿದಂತೆ, ಈಗ ‘ವೋಟರ್ ಹೆಲ್ಪ್‌ಲೈನ್’, ವೋಟರ್ ಟರ್ನ್‌ಔಟ್ ಆ್ಯಪ್, ಸಿವಿಜಿಲ್, ಸುವಿಧಾ, ಸಕ್ಷಮ್ ಹಾಗೂ ಕೆವೈಸಿ ಆ್ಯಪ್‌ಗಳಿವೆ. ಈ ಎಲ್ಲವೂ ಸೇರಿ, 5.5 ಕೋಟಿ ಆ್ಯಪ್‌ಗಳು ಡೌನ್‌ಲೋಡ್ ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.