ವಯನಾಡ್ ಭೂಕುಸಿತದ ದೃಶ್ಯ
ತಿರುವನಂತಪುರ: ವಯನಾಡ್‌ನಲ್ಲಿ ಕಳೆದ ವರ್ಷ ಭಾರಿ ಮಳೆಗೆ ಭೂಕುಸಿತ ಸಂಭವಿಸಿ ಅಪಾರ ಹಾನಿಯಾಗಿದ್ದು ಜನರ ಮನದಿಂದ ಇನ್ನೂ ಮಾಸಿಲ್ಲ. ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಡೆಯುವ ಉದ್ದೇಶದಿಂದ ಕರ್ನಾಟಕದ ಮಂಗಳೂರಿನಲ್ಲಿ ಹೊಸದಾಗಿ ಸ್ಥಾಪಿಸಿರುವ ರೇಡಾರ್‌ನ ನೆರವು ಪಡೆಯಲು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಂದಾಗಿದೆ.
ವಯನಾಡ್ ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ಸಂಬಂಧಿಸಿ ಹವಾಮಾನ ಮುನ್ಸೂಚನೆ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸುವುದು ಮಂಗಳೂರಿನಲ್ಲಿರುವ ರೇಡಾರ್ ಅನ್ನು ಬಳಸುವ ಉದ್ದೇಶವಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.
‘ಸದ್ಯ ‘ನೌಕಾಸ್ಟ್’ ವ್ಯವಸ್ಥೆಯಡಿ ಹವಾಮಾನ ಕುರಿತು ಮಾಹಿತಿ ನೀಡಲಾಗುತ್ತಿದೆ. ಆಯಾ ಜಿಲ್ಲೆಗೆ ಸಂಬಂಧಪಟ್ಟಂತೆ ಮುನ್ಸೂಚನೆಗಳನ್ನು ನೀಡಲಾಗುವುದು. ಈ ನೂತನ ವ್ಯವಸ್ಥೆಯಿಂದ ನಿರ್ದಿಷ್ಟ ಸ್ಥಳ ಕುರಿತ ನಿಖರ ಮುನ್ಸೂಚನೆ ಸಾಧ್ಯವಾಗಲಿದೆ’ ಎಂದು ಐಎಂಡಿಯ ಪ್ರಾದೇಶಿಕ ನಿರ್ದೇಶಕಿ ನೀತಾ ಕೆ.ಗೋಪಾಲ್ ಮಂಗಳವಾರ ಹೇಳಿದ್ದಾರೆ.
‘ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್ ಹಾಗೂ ವಯನಾಡ್‌ನ ಕೆಲ ಭಾಗಗಳು ಸೇರಿ ಇಡೀ ಕೇರಳದ ಉತ್ತರ ಭಾಗದ ಜಿಲ್ಲೆಗಳಿಗೆ ಸಂಬಂಧಿಸಿದ ಹವಾಮಾನ ವೈಪರೀತ್ಯ ಕುರಿತ ಮುನ್ಸೂಚನೆಯನ್ನು ಮಂಗಳೂರಿನಲ್ಲಿನ ರೇಡಾರ್ ಬಳಸಿ ನೀಡಲಾಗುವುದು. ಮಾಹಿತಿನ್ನು ಇಂಗ್ಲಿಷ್ ಹಾಗೂ ಮಲಯಾಳದಲ್ಲಿ ನೀಡಲಾಗುವುದು’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.