ADVERTISEMENT

ಜೀನ್ಸ್‌, ಶರ್ಟ್‌ ಧರಿಸಿದವರಿಗೆ ಇನ್ನಿಲ್ಲ ಕಾಶಿ ವಿಶ್ವನಾಥನ ಸ್ಪರ್ಶಪೂಜೆ

ಏಜೆನ್ಸೀಸ್
Published 13 ಜನವರಿ 2020, 13:08 IST
Last Updated 13 ಜನವರಿ 2020, 13:08 IST
ವಾರಣಾಸಿ
ವಾರಣಾಸಿ   

ವಾರಾಣಸಿ: ಕಾಶಿ ವಿಶ್ವನಾಥನ ಗರ್ಭಗುಡಿಗೆ ಹೋಗಬೇಕು ಎನ್ನುವ ಭಕ್ತರು ಇನ್ನು ಮುಂದೆ ಈ ವಸ್ತ್ರಸಂಹಿತೆ ಅನುಸರಿಸುವುದು ಕಡ್ಡಾಯ.

‘ಜೋತಿರ್ಲಿಂಗವನ್ನು (ಸ್ಪರ್ಶ ದರ್ಶನ) ಸ್ಪರ್ಶಿಸಿ ಪೂಜೆ ಮಾಡಲು ಬಯಸುವ ಪುರುಷ ಭಕ್ತರುಪಂಚೆ ಮತ್ತು ಕುರ್ತ, ಸ್ತ್ರೀಯರು ಸೀರೆಯನ್ನು ಧರಿಸಬೇಕು. ಹಾಗಿದ್ದರೆ ಮಾತ್ರ ಸ್ಪರ್ಶಪೂಜೆಗೆ ಅವಕಾಶ ನೀಡಲಾಗುವುದು’ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಕಾಶಿ ವಿದ್ವತ್‌ ಪರಿಷತ್‌ (ಅತ್ಯಂತ ಹಳೆಯ ಹಾಗೂ ಇಲ್ಲಿನ ಪ್ರತಿಷ್ಠಿತ ಸಂಸ್ಕೃತ ವಿದ್ವಾಂಸರ, ವೇದ ಪಂಡಿತ ಪರಿಷತ್ ಇದಾಗಿದೆ) ಜೊತೆ ಸಭೆ ನಡೆಸಿದ ನಂತರ ದೇವಸ್ಥಾನ ಆಡಳಿತಮಂಡಳಿ ಈ ನಿರ್ಧಾರ ಪ್ರಕಟಿಸಿದೆ.

ADVERTISEMENT

ಈ ಹೊಸ ನಿಯಮ ಜಾರಿ ಮೂಲಕ ಪ್ಯಾಂಟ್‌, ಶರ್ಟ್‌ ಮತ್ತು ಜೀನ್ಸ್‌ ಧರಿಸಿದ ಭಕ್ತರು ದೂರದಿಂದಲೇ ವಿಶ್ವನಾಥನ ದರ್ಶನ ಮಾಡಬಹುದೇ ಹೊರತು ದೇವರನ್ನು ಮುಟ್ಟಿ ಪೂಜಿಸುವುದಕ್ಕೆ ಸಾಧ್ಯವಿಲ್ಲ.

ಉತ್ತರ ಪ್ರದೇಶದ ಪ್ರವಾಸ ಮತ್ತು ಮುಜರಾಯಿ ಸಚಿವ ನೀಲಕಾಂತ್ ತಿವಾರಿ, ‘ಸ್ಪರ್ಶ ದರ್ಶನದ ಅವಧಿ ವಿಸ್ತರಿಸುವ ಬಗ್ಗೆಯೂ ಪರಿಷತ್ತಿನ ಸದಸ್ಯರು ಸಲಹೆ ನೀಡಿದ್ದಾರೆ. ಪ್ರೊ ರಾಮಚಂದ್ರ ಪಾಂಡೆ ಮತ್ತು ಪರಿಷತ್ತಿನ ಇತರ ಸದಸ್ಯರು, ಬೆಳಿಗ್ಗೆ 11 ಗಂಟೆವರೆಗೆ ಸಮಯವನ್ನು ವಿಸ್ತರಿಸಬಹುದು ಎಂದು ತಿಳಿಸಿದ್ದಾರೆ. ಜೊತೆಗ ಸ್ಪರ್ಶದರ್ಶನಕ್ಕೆ ವಸ್ತ್ರಸಂಹಿತೆ ಕಡ್ಡಾಯಗೊಳಿಸಬೇಕು ಎಂಬ ಸಲಹೆಗಳು ಬಂದವು’ ಎಂದು ತಿಳಿಸಿದರು.

‘ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರಿಗೂ ವಸ್ತ್ರನೀತಿ ಇರಬೇಕು ಎಂಬ ಬಗ್ಗೆಯೂ ಮಾತುಗಳು ಸಭೆಯಲ್ಲಿ ಕೇಳಿಬಂದಿದೆ’ ಎಂದರು.

‘ಆದಷ್ಟು ಬೇಗ ಈ ನಿಯಮವನ್ನು ಜಾರಿಗೆ ತನ್ನಿ ಎಂದು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ. ಹಾಗಾಗಿಈ ಹೊಸ ವಸ್ತ್ರಸಂಹಿತೆ ಶೀಘ್ರ ಜಾರಿಗೆ ಬರಲಿದೆ. ಗುಂಪಿನಲ್ಲಿ ಅರ್ಚಕರನ್ನು ಸುಲಭವಾಗಿ ಗುರುತಿಸುವುದಕ್ಕಾಗಿ ಅವರಿಗೂ ಇಂತಹದ್ದೇ ವಸ್ತ್ರ ಎಂದು ನಿರ್ಧರಿಸಲಾಗುವುದು’ ಎಂದು ವಿವರಿಸಿದರು.

‘ವಿಶ್ವನಾಥನದ ಸನ್ನಿಧಾನದಲ್ಲಿ ವೇದ ಕೇಂದ್ರವೊಂದನ್ನು ನಿರ್ಮಿಸಲಾಗುವುದು. ಅಲ್ಲಿ ಅರ್ಚಕರಿಗೆ ಕಂಪ್ಯೂಟರ್‌ ಬೇಸಿಕ್‌ ಮತ್ತು ಇಂ‌ಗ್ಲಿಷ್‌ ಕಲಿಕೆಗೂ ಅಲ್ಲಿ ಅವಕಾಶ ಕಲ್ಪಿಸಲಾಗುವುದು’ಎಂದೂ ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.