ADVERTISEMENT

ಮಹಾರಾಷ್ಟ್ರ: ಶಿವಾಜಿ ಮಹಾರಾಜರ ನೂತನ ಪ್ರತಿಮೆ ಅನಾವರಣ

ಗಾಳಿಗೆ ಉರುಳಿಬಿದ್ದಿದ್ದ ಸ್ಥಳದಲ್ಲೇ ಪುನರ್‌ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 11 ಮೇ 2025, 15:56 IST
Last Updated 11 ಮೇ 2025, 15:56 IST
ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ರಾಜಕೋಟ್ ಕೋಟೆಯಲ್ಲಿ ಭಾನುವಾರ ಅನಾವರಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ನೂತನ ಪ್ರತಿಮೆ– ಪಿಟಿಐ ಚಿತ್ರ
ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯ ರಾಜಕೋಟ್ ಕೋಟೆಯಲ್ಲಿ ಭಾನುವಾರ ಅನಾವರಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ನೂತನ ಪ್ರತಿಮೆ– ಪಿಟಿಐ ಚಿತ್ರ   

ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಮುಖ ರಾಜಕೀಯ ವಿಷಯವಾಗಿದ್ದ ಸಿಂಧೂದುರ್ಗ ಜಿಲ್ಲೆ ಮಲ್ವಾನ್ ತಾಲೂಕಿನ ರಾಜಕೋಟ್‌ ಕೋಟೆಯ ಛತ್ರಪತಿ ಶಿವಾಜಿ ಮಹಾರಾಜರ ನೂತನ ಪ್ರತಿಮೆಯನ್ನು ಒಂಬತ್ತು ತಿಂಗಳ ನಂತರ ಭಾನುವಾರ ಅನಾವರಣಗೊಳಿಸಲಾಯಿತು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಪ್ರತಿಮೆಯನ್ನು ಅನಾವರಣ ಮಾಡಿದರು. ಉಪಮುಖ್ಯಮಂತ್ರಿ ಏಕನಾಥ ಶಿಂಧೆ, ಸಂಸದರು, ಸಚಿವರು, ಶಾಸಕರು ಮತ್ತು ಮುಖಂಡರು ಹಾಜರಿದ್ದರು.

2023ರ ಡಿಸೆಂಬರ್ 4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದರು. ವಿಧಾನಸಭೆ ಚುನಾವಣೆ ಹತ್ತಿರವಿದ್ದಾಗಲೇ 2024ರ ಆಗಸ್ಟ್‌ 4ರಂದು ಭಾರಿ ಗಾಳಿಗೆ  35 ಅಡಿ ಎತ್ತರದ ಪ್ರತಿಮೆ ಉರುಳಿಬಿದ್ದಿತ್ತು. ಕಳಪೆ ಕಾಮಗಾರಿಯ ಪರಿಣಾಮ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಇದನ್ನು ಚುನಾವಣಾ ಅಸ್ತ್ರ ಮಾಡಿಕೊಂಡಿದ್ದವು.

ADVERTISEMENT

ಇದೇ ವೇಳೆ ಪಲ್ಘಾರ್‌ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಿವಾಜಿ ಪ್ರತಿಮೆ ಭಗ್ನಗೊಂಡಿದ್ದಕ್ಕಾಗಿ ಮಹಾರಾಷ್ಟ್ರ ಜನರ ಕ್ಷಮೆಯನ್ನೂ ಕೋರಿದ್ದರು.

ಆನಂತರ ಹೊಸ ಪ್ರತಿಮೆ ನಿರ್ಮಾಣ ಕಾರ್ಯ ಶುರುವಾಗಿತ್ತು. ನೂತನ ಪ್ರತಿಮೆಯು ನೆಲಮಟ್ಟದಿಂದ 91 ಅಡಿ ಎತ್ತರವಿದ್ದು 10 ಅಡಿ ಪಾದಪೀಠ ಒಳಗೊಂಡಿದೆ. ಖಡ್ಗದ ಉದ್ದವೇ 29 ಅಡಿ ಇದೆ. ಏಕತಾ ಪ್ರತಿಮೆ ನಿರ್ಮಿಸಿದ್ದ ಪ್ರಖ್ಯಾತ ಶಿಲ್ಪಿ ರಾಮ ಸುತಾರ್ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.