ADVERTISEMENT

ಅರುಣಾಚಲ ಪ್ರದೇಶದಲ್ಲಿ ಹೊಸ ಹಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 16:06 IST
Last Updated 29 ಡಿಸೆಂಬರ್ 2020, 16:06 IST
ಪರಿಯಾಸ್‌ ಕಡುರೈ
ಪರಿಯಾಸ್‌ ಕಡುರೈ   

ಮುಂಬೈ: ‘ಪರಿಯಾಸ್‌ ಕಡುರೈ’ ಹೆಸರಿನ ಬಸವನ ಹುಳುಗಳನ್ನು ತಿನ್ನುವ, ವಿಷರಹಿತ ಹೊಸ ಬಗೆಯ ಹಾವೊಂದನ್ನು ಅರುಣಾಚಲ ಪ್ರದೇಶದಲ್ಲಿ ಸಂಶೋಧಕರ ತಂಡವೊಂದು ಪತ್ತೆಹಚ್ಚಿದೆ.

2019 ಜುಲೈನಲ್ಲಿ ಸಂಶೋಧಕರು ಕಮಲಂಗ್‌ ಹುಲಿ ಸಂರಕ್ಷಿತಾರಣ್ಯದ ದಟ್ಟ ಕಾಡಿನೊಳಗೆ ಕಾರ್ಯ ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹಾವನ್ನು ಪತ್ತೆಹಚ್ಚಿದ್ದಾರೆ.ಹಿಮಾಲಯದಲ್ಲಿ ಜೀವವೈವಿಧ್ಯದ ಸಂರಕ್ಷಣೆಗಾಗಿ, ನ್ಯಾಷನಲ್‌ ಜಿಯೊಗ್ರಾಫಿಕ್‌ ಛಾಯಾಚಿತ್ರಗಾರ, ವನ್ಯಜೀವಿ ಚಿತ್ರನಿರ್ಮಾಪಕ ಸಂದೇಶ್‌ ಕಡೂರ್‌ ಅವರ ಕೊಡುಗೆಯನ್ನು ಪರಿಗಣಿಸಿ ಹೊಸ ವರ್ಗದ ಹಾವಿಗೆ ಹೆಸರು ಇಡಲಾಗಿದೆ.

ಈ ವರ್ಗದ ಹಾವುಗಳನ್ನು ‘ಸ್ನೈಲ್‌ ಈಟಿಂಗ್‌ ಸ್ನೇಕ್ಸ್‌’ ಎಂದು ಕರೆಯುತ್ತಾರೆ. ಏಕೆಂದರೆ, ಇವುಗಳು ಬಸವನ ಹುಳುವನ್ನು ತಿನ್ನುತ್ತವೆ. ಹೊಸ ವರ್ಗದ ಹಾವು, ಸಾಮಾನ್ಯವಾಗಿ ಕಮಲಂಗ್‌ ಹುಲಿ ಸಂರಕ್ಷಿತಾರಣ್ಯದ ಸುತ್ತಮುತ್ತಲೇ ಕಾಣಿಸಿಕೊಳ್ಳುತ್ತವೆ ಎಂದು ಅಂತರರಾಷ್ಟ್ರೀಯ ವಿಜ್ಞಾನ ನಿಯತಕಾಲಿಕ ‘ಯುರೊಪಿಯನ್‌ ಜರ್ನಲ್‌ ಆಫ್‌ ಟ್ಯಾಕ್ಸೊನೊಮಿ’ಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಹೊಸ ವರ್ಗದ ಹಾವಿಗೂ, ಇದೇ ಜಾತಿಗೆ ಸೇರಿದ ಹಾವಿಗೂ ವ್ಯತ್ಯಾಸ ಹೇಳುವುದು ಕಷ್ಟ. ಆದರೆ, ಡಿಎನ್‌ಎ ಮಾದರಿ, ಹಾವಿನ ತಲೆಯ ಆಕೃತಿಯಲ್ಲಿ ವ್ಯತ್ಯಾಸವಿದೆ’ ಎಂದು ಹೇಳಲಾಗಿದೆ. ‘ಈಶಾನ್ಯ ಭಾರತದ ಕಾಡುಗಳಲ್ಲಿ ಇರುವ ಹಲವು ಜೀವವೈವಿಧ್ಯವನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. ರಸ್ತೆ ವಿಸ್ತರಣೆ, ಅಣೆಕಟ್ಟುಗಳ ನಿರ್ಮಾಣ ಹಾಗೂ ಜಲವಿದ್ಯುತ್‌ ಘಟಕಗಳ ನಿರ್ಮಾಣವು ಅರುಣಾಚಲ ಪ್ರದೇಶದಾದ್ಯಂತ ಕಾಡು ಹಾಗೂ ಜೀವವೈವಿಧ್ಯದ ಮೇಲೆ ಪರಿಣಾಮ ಬೀರುತ್ತಿವೆ’ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.