ADVERTISEMENT

ಕೇರಳದ ಸಚಿವರ ಕಚೇರಿಯ ಶೌಚಾಲಯ ನಿರ್ಮಾಣದ ಖರ್ಚು ಸರ್ಕಾರಿ ಮನೆ ವೆಚ್ಚಗಿಂತ ಹೆಚ್ಚು

ಐಎಎನ್ಎಸ್
Published 24 ಡಿಸೆಂಬರ್ 2021, 15:51 IST
Last Updated 24 ಡಿಸೆಂಬರ್ 2021, 15:51 IST
ಕೇರಳ ಮೀನುಗಾರಿಕಾ ಸಚಿವ ಸಾಜಿ ಚೆರಿಯನ್
ಕೇರಳ ಮೀನುಗಾರಿಕಾ ಸಚಿವ ಸಾಜಿ ಚೆರಿಯನ್   

ತಿರುವನಂತಪುರ: ಕೇರಳ ರಾಜ್ಯದಲ್ಲಿ ‘ಲೈಫ್ ಮಿಷನ್’ ಯೋಜನೆಯಡಿ ಬಡವರಿಗೆ ಮನೆ ನಿರ್ಮಿಸಲು ಕೇವಲ ₹4 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಸಚಿವರೊಬ್ಬರ ಕಚೇರಿಯಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕಾಗಿ ₹4.10 ಲಕ್ಷ ಮಂಜೂರು ಮಾಡಿರುವುದು ವಿವಾದವನ್ನು ಹುಟ್ಟು ಹಾಕಿದೆ.

ಈ ಕುರಿತಂತೆ ಆಡಳಿತ ಇಲಾಖೆಯಿಂದ ಡಿಸೆಂಬರ್ 21 ರಂದು ಆದೇಶ ಹೊರಬಿದ್ದಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಶೌಚಾಲಯಕ್ಕೆ ದುಬಾರಿ ಮೊತ್ತ ಮಂಜೂರು ಮಾಡಿಸಿಕೊಂಡಿರುವ ರಾಜ್ಯದ ಮೀನುಗಾರಿಕಾ ಸಚಿವ ಸಾಜಿ ಚೆರಿಯನ್ ಅವರು ಸಿಪಿಐ-ಎಂನಿಂದ ಎರಡು ಬಾರಿ ಶಾಸಕರಾಗಿದ್ದು, ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಸರ್ಕಾರದಲ್ಲಿ ಅಚ್ಚರಿಯ ರೀತಿಯಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಗಿಟ್ಟಿಸಿದ್ದರು. ಅವರಿಗಿಂತ ಹಿರಿಯ ಶಾಸಕರಿದ್ದರೂ ಸಹ ಚೆರಿಯನ್‌ಗೆ ಸಚಿವ ಸ್ಥಾನ ದಕ್ಕಿತ್ತು.

ADVERTISEMENT

56 ವರ್ಷದ ಚೆರಿಯನ್ ಅವರು, 2018 ರಲ್ಲಿ ಪಕ್ಷದ ಶಾಸಕರಾಗಿದ್ದ ಕೆ ಕೆ ರಾಮಚಂದ್ರನ್ ನಾಯರ್ ನಿಧನದ ನಂತರ ಆಲಪ್ಪುಳ ಜಿಲ್ಲೆಯ ಚೆಂಗನೂರ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

ಬಳಿಕ, ಈ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡಿದ್ದರು.

ಕೇರಳ ರಾಜ್ಯವು ಅತ್ಯಂತ ಕೆಟ್ಟ ಹಣಕಾಸು ಪರಿಸ್ಥಿತಿ ಎದುರಿಸುತ್ತಿರುವ ಈ ಸಂದರ್ಭದಲ್ಲೇ ಚೆರಿಯನ್ ಐಷಾರಾಮಿ ಶೌಚಾಲಯ ನಿರ್ಮಾಣಕ್ಕೆ ದುಂದುವೆಚ್ಚ ಮಾಡುತ್ತಿರುವುದು ಭಾರಿ ಟೀಕೆಗೆ ಕಾರಣವಾಗಿದೆ.

‘ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ ಇಂತಹ ದುಂದು ವೆಚ್ಚ ನಡೆಯುತ್ತಿರುತ್ತವೆ. ಎಡಪಕ್ಷಗಳು ಇಂತಹುದರಲ್ಲಿ ತೊಡಗುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ. ಬೇರೆಯವರಿಗಿಂತ ನಾವು ಭಿನ್ನರಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ’ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.