ADVERTISEMENT

ನ್ಯೂಜಿಲೆಂಡ್‌ನಲ್ಲಿ ಉಗ್ರನ ದಾಳಿ: ಬಾಂಗ್ಲಾ ಕ್ರಿಕೆಟ್‌ ತಂಡ ಪಾರು

ಆತಂಕಕ್ಕೊಳಗಾದ ಆಟಗಾರರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 19:43 IST
Last Updated 15 ಮಾರ್ಚ್ 2019, 19:43 IST
ದಾಳಿ ಖಂಡಿಸಿ ಇಸ್ತಾಂಬುಲ್‌ನಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು ಎಎಫ್‌ಪಿ ಚಿತ್ರ
ದಾಳಿ ಖಂಡಿಸಿ ಇಸ್ತಾಂಬುಲ್‌ನಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು ಎಎಫ್‌ಪಿ ಚಿತ್ರ   

ಕ್ರೈಸ್ಟ್‌ಚರ್ಚ್‌/ಸಿಡ್ನಿ/ ನವದೆಹಲಿ(ಎಎಫ್‌ಪಿ/ಪಿಟಿಐ/ಎಪಿ): ನ್ಯೂಜಿಲೆಂಡ್‌ ವಿರುದ್ಧ ಕ್ರಿಕೆಟ್‌ ಟೆಸ್ಟ್‌ ಪಂದ್ಯವಾಡಲು ಕ್ರೈಸ್ಟ್‌ಚರ್ಚ್‌ಗೆ ಬಂದಿದ್ದ ಬಾಂಗ್ಲಾದೇಶ ತಂಡ ಕೂದಲೆಳೆಯ ಅಂತರದಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾಗಿದೆ.

ನಗರದ ಮಸೀದಿ ಮೇಲೆ ಬಂದೂಕುಧಾರಿಯೊಬ್ಬ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ನಡೆಸಿದ ದಾಳಿಯಿಂದ ಇಡೀ ತಂಡ ಆತಂಕಕ್ಕೆ ಒಳಗಾಯಿತು.

ಬಸ್‌ನಿಂದ ಕೆಳಗಿಳಿದಿದ್ದ ತಂಡದ ಕೆಲವು ಸದಸ್ಯರು ಮಸೀದಿ ಪ್ರವೇಶಿಸಲು ಸಜ್ಜಾಗಿದ್ದರು. ಅದಕ್ಕೂ ಕೆಲ ನಿಮಿಷಗಳ ಮುನ್ನವಷ್ಟೇ ಅಲ್ಲಿ ದಾಳಿ ನಡೆದಿತ್ತು.

ADVERTISEMENT

ಪೂರ್ವ ನಿಯೋಜಿತ ವೇಳಾಪಟ್ಟಿ ಪ್ರಕಾರ, ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಟಗಾರರು ಅಭ್ಯಾಸದಲ್ಲಿ ತೊಡಗುವವರಿದ್ದರು. ಹ್ಯಾಗ್ಲಿ ಓವಲ್‌ ಮೈದಾನ ಸಮೀಪದ ಮಸೀದಿಗೆ ಆಟಗಾರರು ಪ್ರಾರ್ಥನೆಗಾಗಿ ತೆರಳಿದ್ದರು. ತಂಡವನ್ನು ಕರೆದೊಯ್ದಿದ್ದ ಬಸ್‌, ಹತ್ಯಾಕಾಂಡ ನಡೆದ ಸ್ಥಳದಿಂದ ಕೆಲವೇ ಮೀಟರ್‌ಗಳ ಅಂತರದಲ್ಲಿತ್ತು. ತಮ್ಮ ಕಣ್ಣೆದುರಿಗೆ ಮಹಿಳೆಯೊಬ್ಬರು ಕುಸಿದು ಬಿದ್ದರು. ಮಹಿಳೆಗೆ ನೆರವಾಗಲು ಕೆಲವರು ಮುಂದಾಗುವಷ್ಟರಲ್ಲಿ ಮಸೀದಿಯಿಂದ ಏಕಕಾಲಕ್ಕೆ ಹಲವರು ಓಡುತ್ತ ಬಂದರು. ಅವರಲ್ಲಿ ಬಹುತೇಕ ಮಂದಿ ರಕ್ತಸಿಕ್ತರಾಗಿದ್ದರು.

‘ಅಂತಹ ಭಯಾನಕ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಏನು ಮಾಡಬೇಕು ಎನ್ನುವುದು ತಿಳಿಯಲಿಲ್ಲ. ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಹೃದಯದ ಬಡಿತವೂ ಹೆಚ್ಚಾಗಿತ್ತು’ಎಂದು ಬಸ್‌ನಲ್ಲಿದ್ದ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಸಾಮರ್ಥ್ಯ ವಿಶ್ಲೇಷಕರಾಗಿರುವ ಶ್ರೀನಿವಾಸ್‌ ಚಂದ್ರಶೇಖರನ್‌ ದೂರವಾಣಿ ಮೂಲಕ ಅನುಭವವನ್ನು ಹಂಚಿಕೊಂಡಿದ್ದಾರೆ.

‘ಮಸೀದಿಯಿಂದ ಸ್ವಲ್ಪ ದೂರದಲ್ಲಿದ್ದಾಗ ದಿಢೀರನೆ ಗುಂಡು ಸಿಡಿಸಿರುವ ಶಬ್ದವಾಯಿತು. ಆಟಗಾರರಿಗೆ ಮತ್ತು ನನಗೆ ಏನು ನಡೆಯುತ್ತಿದೆ ಎನ್ನುವುದು ತಿಳಿಯಲಿಲ್ಲ. ಕೆಲ ಹೊತ್ತಿನಲ್ಲೇ ಜನರು ರಕ್ಷಣೆಗಾಗಿ ಧಾವಿಸುತ್ತ ಬಂದರು. ಬಸ್‌ನಿಂದ ಹೊರಗೆ ಬರಬೇಡಿ. ಸೀಟುಗಳು ನಡುವಣ ಜಾಗದಲ್ಲಿ ಎಚ್ಚರದಿಂದ ಅಡಗಿಕೊಳ್ಳಲು ಸೂಚಿಸಲಾಯಿತು. ಪೊಲೀಸರು ಬಂದ ಬಳಿಕವೇ ಸುರಕ್ಷಿತವಾಗಿ ಮೈದಾನಕ್ಕೆ ಕರೆದೊಯ್ಯಲಾಯಿತು’ಎಂದು ಅವರು ವಿವರಿಸಿದ್ದಾರೆ.

’ತಂಡದ ಸದಸ್ಯರು ಸುರಕ್ಷಿತವಾಗಿದ್ದಾರೆ. ಆದರೆ, ಮಾನಸಿಕವಾಗಿ ಆಘಾತಗೊಂಡಿದ್ದಾರೆ. ಹೋಟೆಲ್‌ನಲ್ಲೇ ಉಳಿಯುವಂತೆ ತಂಡಕ್ಕೆ ಸೂಚಿಸಲಾಗಿದೆ‘ ಎಂದು ಬಾಂಗ್ಲಾದೇಶ ತಂಡದ ವಕ್ತಾರರು ತಿಳಿಸಿದ್ದಾರೆ.

’ದಾಳಿ ಬಳಿಕ ನ್ಯೂಜಿಲೆಂಡ್‌ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಶೀಘ್ರ ತಂಡವು ತವರಿಗೆ ಮರಳಲಿದೆ‘ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ನ್ಯೂಜಿಲೆಂಡ್‌ನಲ್ಲಿ ಸಾಮೂಹಿಕ ದಾಳಿಗಳು ನಡೆದಿರುವುದು ಅಪರೂಪ. 1992ರಲ್ಲಿ ಬಂದೂಕಿಗೆ ಸಂಬಂಧಪಟ್ಟ ಕಾನೂನುಗಳನ್ನು ಬಿಗಿಗೊಳಿಸಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.

ಮೂರನೇ ಮಸೀದಿ ಮೇಲೆ ದಾಳಿಗೂ ಸಂಚು: ’ಕ್ರೈಸ್ಟ್‌ಚರ್ಚ್‌ ಮತ್ತು ಲಿನ್‌ವೂಡ್‌ನಲ್ಲಿ ಮಸೀದಿಗಳ ಬಳಿಕ ಅವಕಾಶ ದೊರೆತರೆ ಅಶ್ಬುರ್ಟಾನ್‌ ಪಟ್ಟಣದ ಮಸೀದಿ ಮೇಲೆಯೂ ದಾಳಿ ನಡೆಸುವ ಉದ್ದೇಶವಿದೆ. ಸಾಮೂಹಿಕ ವಲಸೆಯಿಂದ ಜಗತ್ತಿನ ಯಾವುದೇ ಪ್ರದೇಶ ಮುಕ್ತವಾಗಿಲ್ಲ ಎನ್ನುವುದನ್ನು ತೋರಿಸಲು ದಾಳಿಗೆ ನ್ಯೂಜಿಲೆಂಡ್‌ ಆಯ್ಕೆ ಮಾಡಿಕೊಳ್ಳಲಾಯಿತು‘ ಎಂದು ಬಂದೂಕುಧಾರಿಯು 74ಪುಟಗಳ ಹೊತ್ತಿಗೆಯಲ್ಲಿ ತಿಳಿಸಿದ್ದಾನೆ.

ಕ್ರೈಸ್ಟ್‌ಚರ್ಚ್‌ನ ಅಲ್‌ ನೂರ್‌ ಮಸೀದಿಯಲ್ಲಿ 41 ಮಂದಿ ಸಾವಿಗೀಡಾಗಿದ್ದಾರೆ. ಲಿನ್‌ವೂಡ್‌ ಏವ್‌ ಮಸೀದಿಯಲ್ಲಿ ಏಳು ಮಂದಿ ಸಾವಿಗೀಡಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ ಎಲ್ಲಿ ಸಾವಿಗೀಡಾದರು ಎನ್ನುವುದು ಗೊತ್ತಾಗಿಲ್ಲ. ಈ ಎರಡು ಮಸೀದಿಗಳ ನಡುವೆ ಐದು ಕಿಲೋ ಮೀಟರ್‌ ಅಂತರವಿದೆ. ಎರಡು ಸ್ಥಳಗಳಲ್ಲಿ ಒಬ್ಬನೇ ಕೃತ್ಯವೆಸಗಿದ್ದಾನೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ದಾಳಿ ನಡೆದ ಸ್ಥಳದಲ್ಲಿ ಎರಡು ಸುಧಾರಿತ ಸ್ಫೋಟಕ ಉಪಕರಣಗಳು ಪತ್ತೆಯಾಗಿದ್ದು, ಇವುಗಳನ್ನು ಸೇನೆ ನಿಷ್ಕ್ರಿಯಗೊಳಿಸಿದೆ.

ಇಸ್ಲಾಂ ಭೀತಿಯೇ ಕಾರಣ: ಇಮ್ರಾನ್‌
ಇಸ್ಲಾಮಾಬಾದ್‌ (ಪಿಟಿಐ): ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌, ಹೆಚ್ಚುತ್ತಿರುವ ಇಸ್ಲಾಂ ಭೀತಿಯೇ ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ.

‘ಭಯೋತ್ಪಾದನೆ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಪದೇ ಪದೇ ಹೇಳಿದ್ದೇವೆ. 2001ರ ಸೆಪ್ಟೆಂಬರ್‌ 11ರಂದು ನ್ಯೂಯಾರ್ಕ್‌ನಲ್ಲಿ ನಡೆದ ದಾಳಿ ಬಳಿಕ ಪ್ರತಿಯೊಂದು ಕೃತ್ಯಕ್ಕೂ ಇಸ್ಲಾಂ ಮತ್ತು 130 ಕೋಟಿ ಮುಸ್ಲಿಮರನ್ನು ಸಾಮೂಹಿಕವಾಗಿ ದೂಷಿಸುವ ಪ್ರವೃತ್ತಿ ಆರಂಭವಾಯಿತು. ಈಗ ಮುಸ್ಲಿಮರ ರಾಜಕೀಯ ಹೋರಾಟವನ್ನು ಹತ್ತಿಕ್ಕಲು ಉದ್ದೇಶಪೂರ್ವಕವಾಗಿಯೇ ದಾಳಿ ನಡೆಸಲಾಗಿದೆ‘ ಎಂದು ಟ್ವೀಟ್‌ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ
ಬಂದೂಕುಧಾರಿ ಉಗ್ರ ಇಡೀ ಕೃತ್ಯವನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ್ದ. ಹೀಗಾಗಿ, ದಾಳಿಯ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಅಧಿಕಾರಿಗಳು ಈ ವಿಡಿಯೊ ನೈಜತೆಯನ್ನು ದೃಢಪಡಿಸಿಲ್ಲ. ವಿಡಿಯೊ ಭಯಾನಕವಾಗಿದ್ದು, ವಿನಿಮಯ ಮಾಡಿಕೊಳ್ಳದಂತೆ ಅಧಿಕಾರಿಗಳು ಕೋರಿದ್ದಾರೆ.

ಈ ವಿಡಿಯೊದಲ್ಲಿ ಮಸೀದಿಯ ಒಳಗೆ ನುಗ್ಗುವ ಬಂದೂಕುಧಾರಿ ಪದೇ ಪದೇ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಬಳಿಕ ಹೊರಗೆ ಬಂದು ಅಲ್ಲಿನ ಜನರ ಮೇಲೆ ದಾಳಿ ಮಾಡುತ್ತಾನೆ. ನಂತರ ಕಾರು ಚಲಾಯಿಸಿಕೊಂಡು ಪರಾರಿಯಾಗುತ್ತಾನೆ.

ನೆರವು ಕೋರಿಕೆ
ದಾಳಿಗೆ ಒಳಗಾಗಿರುವ ಹೈದರಾಬಾದ್‌ ವ್ಯಕ್ತಿಗೆ ಅಗತ್ಯ ನೆರವು ನೀಡುವಂತೆ ಅಖಿಲ ಭಾರತ ಮಜ್ಲಿಸ್–ಇ– ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ ಕೋರಿದ್ದಾರೆ.

’ಕ್ರೈಸ್ಟ್‌ಚರ್ಚ್‌ನ ವಿಡಿಯೊ ನೋಡಿದಾಗ ಅಹ್ಮದ್‌ ಜೆಹಾಂಗೀರ್‌ ಎನ್ನುವವರ ಮೇಲೆ ದಾಳಿ ನಡೆದಿದೆ. ಇವರ ಸಹೋದರ ಇಕ್ಬಾಲ್‌ ಜೆಹಾಂಗಿರ್‌ ಹೈದರಾಬಾದ್‌ ನಿವಾಸಿಯಾಗಿದ್ದು, ನ್ಯೂಜಿಲೆಂಡ್‌ಗೆ ತೆರಳಲು ಇಚ್ಛಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅಗತ್ಯ ನೆರವು ನೀಡಬೇಕು‘ ಎಂದು ಟ್ವೀಟ್‌ ಮೂಲಕ ಕೋರಿದ್ದಾರೆ.

*
ನ್ಯೂಜಿಲೆಂಡ್‌ ಇತಿಹಾಸದಲ್ಲಿ ಇದು ಕರಾಳ ದಿನ. ಇದು ಭಯೋತ್ಪಾದಕನ ಕೃತ್ಯ ಎನ್ನುವುದು ಸ್ಪಷ್ಟವಾಗಿದೆ.
-ಜಸಿಂದಾ ಅರ್ಡೆರ್ನ್‌, ನ್ಯೂಜಿಲೆಂಡ್‌ ಪ್ರಧಾನಿ

ದಾಳಿಕೋರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.