ADVERTISEMENT

ರೈತ ನಾಯಕ ರಾಕೇಶ್‌ ಟಿಕಾಯತ್ ಬಂಧನದ ಸುದ್ದಿ ಸುಳ್ಳು: ದೆಹಲಿ ಪೊಲೀಸರ ಸ್ಪಷ್ಟನೆ

ಪಿಟಿಐ
Published 26 ಜೂನ್ 2021, 9:35 IST
Last Updated 26 ಜೂನ್ 2021, 9:35 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್    

ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್‌ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ ಎಂಬುದು ಸುಳ್ಳು ಸುದ್ದಿ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

‘ಇಂಥ ಸುಳ್ಳು ಸುದ್ದಿ ಹರಿಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ‘ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಳ್ಳು ಸುದ್ದಿ! ರಾಕೇಶ್ ಟಿಕಾಯತ್‌ ಬಂಧನಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ಮಾಹಿತಿ ‘ಸುಳ್ಳು ಸುದ್ದಿ‘ಯಾಗಿದೆ. ಇಂಥ ಸುಳ್ಳು ಸುದ್ದಿಗಳಿಂದ ದೂರವಿರಿ. ಇಂಥವುಗಳನ್ನು ನಂಬಬೇಡಿ. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ‘ ಎಂದು ನವದೆಹಲಿಯ ಪೂರ್ವ ವಿಭಾಗದ ಡಿಸಿಪಿ ಕಶ್ಯಪ್ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಭಾರತೀಯ ಕಿಸಾನ್ ಯೂನಿಯನ್‌ ಮಾಧ್ಯಮ ವಿಭಾಗದ ಉಸ್ತುವಾರಿ ಧರ್ಮೇಂದ್ರ ಮಲಿಕ್ ಅವರು ‘ರಾಕೇಶ್‌ ಟಿಕಾಯತ್‌ ಅವರನ್ನು ಬಂಧಿಸಿಲ್ಲ‘ ಎಂದು ತಿಳಿಸಿದ್ದಾರೆ.

‘ರಾಕೇಶ್ ಟಿಕಾಯತ್ ಅವರನ್ನು ಪೊಲೀಸರು ಬಂಧಿಸಿಲ್ಲ. ಅವರು ಸದ್ಯ ಗಾಜಿಪುರದ ಪ್ರತಿಭಟನಾ ಸ್ಥಳದಲ್ಲಿದ್ದು, ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಸಂಘರ್ಷ ನಡೆದಿಲ್ಲ‘ ಎಂದು ಮಲಿಕ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ರೈತ ಸಂಘಟನೆಗಳು ಕರೆ ನೀಡಿದ್ದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಶನಿವಾರ ದೆಹಲಿಯಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.