ADVERTISEMENT

ಮುಂದಿನ ಸಿಜೆಐ: ಚಂದ್ರಚೂಡ್‌ ಹೆಸರು ಶಿಫಾರಸು

ತನ್ನ ಉತ್ತರಾಧಿಕಾರಿ ಹೆಸರು ರವಾನಿಸಿದ ಸಿಜೆಐ ಲಲಿತ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 19:30 IST
Last Updated 11 ಅಕ್ಟೋಬರ್ 2022, 19:30 IST
ಡಿ.ವೈ. ಚಂದ್ರಚೂಡ್‌
ಡಿ.ವೈ. ಚಂದ್ರಚೂಡ್‌   

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್‌ ಅವರನ್ನು ತನ್ನ ಉತ್ತರಾಧಿಕಾರಿ
ಯನ್ನಾಗಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು.ಯು. ಲಲಿತ್‌ ಅವರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಈ ಮೂಲಕ ಅವರು ಮುಂದಿನ ಸಿಜೆಐ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಚಂದ್ರಚೂಡ್ ಅವರು ದೇಶದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್‌ 9ರಂದು ಅಧಿಕಾರ ಸ್ವೀಕರಿಸುವುದು ಖಚಿತವಾಗಿದೆ.

ನವೆಂಬರ್‌ 8ರಂದು ನಿವೃತ್ತರಾಗಲಿರುವ ಸಿಜೆಐ ಲಲಿತ್‌ ಅವರಿಗೆ ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡುವಂತೆ ಕೇಂದ್ರ ಸರ್ಕಾರ ಅಕ್ಟೋಬರ್‌ 7ರಂದು ಪತ್ರ ರವಾನಿಸಿತ್ತು.

ADVERTISEMENT

‘ನ್ಯಾಯಾಂಗ ನೇಮಕಾತಿ ನಿಯಮಾವಳಿ’(ಎಂಒಪಿ) ಪ್ರಕಾರ ಅತ್ಯಂತ ಹಿರಿಯ ನ್ಯಾಯಮೂರ್ತಿಯನ್ನು ಮುಂದಿನ ಸಿಜೆಐ ಆಗಿ ನಿರ್ಗಮಿತ ಸಿಜೆಐ ಶಿಫಾರಸು ಮಾಡಬೇಕು.

ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಸಿಜೆಐ ಆಗಿ ಎರಡು ವರ್ಷಗಳ ಅಧಿಕಾರವಧಿ ಹೊಂದಿರುತ್ತಾರೆ. ಅವರು 2024ರ ನವೆಂಬರ್‌ 10ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು 65 ಆಗಿದೆ.

ವೈ.ವಿ.ಚಂದ್ರಚೂಡ್‌ ಅವರ ಪುತ್ರ: ದೇಶದಲ್ಲಿ ದೀರ್ಘಾವಧಿ (1978ರ ಫೆಬ್ರುವರಿಯಿಂದ 1985ರ ಜುಲೈ 11ರವರೆಗೆ) ಸಿಜೆಐ ಆಗಿ ಕಾರ್ಯ ನಿರ್ವಹಿಸಿದ್ದ ವೈ.ವಿ.ಚಂದ್ರಚೂಡ್‌ ಅವರ ಮಗನಾಗಿರುವ ಡಿ.ವೈ.ಚಂದ್ರಚೂಡ್‌ ಅವರು, 2016ರ ಮೇ 13ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.

1998ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದ ಅವರು ಬಳಿಕ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡರು. 2000ದ ಮಾರ್ಚ್‌ 29ರಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಆರಂಭಿಸಿದ ಅವರು, 2013ರ ಅಕ್ಟೋಬರ್‌ 31ರಿಂದ ಅಲಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ದೆಹಲಿಯ ಸೇಂಟ್‌ ಸ್ಟೀಫನ್ಸ್‌ ಕಾಲೇಜಿನಲ್ಲಿ ಬಿ.ಎ (ಅರ್ಥಶಾಸ್ತ್ರ) ಆನರ್ಸ್‌ ಪದವಿ ಪೂರ್ಣಗೊಳಿಸಿದ ಅವರು, ದೆಹಲಿ ವಿಶ್ವವಿದ್ಯಾಲಯದಲ್ಲಿ
ಎಲ್‌ಎಲ್‌ಬಿ ಹಾಗೂ ಅಮೆರಿಕದ ಹಾರ್ವರ್ಡ್‌ ಲಾ ಸ್ಕೂಲ್‌ನಲ್ಲಿ ಎಲ್‌ಎಲ್‌ಎಂ ಮತ್ತು ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ಬಾಂಬೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಕೈಗೊಂಡಿದ್ದ ಅವರು, ಮುಂಬೈ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.