ADVERTISEMENT

ತಿಂಗಳಲ್ಲಿ ಪರಿಹಾರ ಪಾವತಿಸಿ –ಎನ್‌ಜಿಟಿ

ಕಲ್ಲುಗಣಿ ಸ್ಫೋಟ ಪ್ರಕರಣ –ಸರ್ಕಾರಕ್ಕೆ ಸೂಚನೆ * ನಂತರ ಗಣಿ ಮಾಲೀಕರಿಂದ ವಸೂಲು ಮಾಡಲು ಆದೇಶ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 11:47 IST
Last Updated 20 ಜೂನ್ 2021, 11:47 IST
ಹಿರೇನಾಗವಲ್ಲಿ ಬಳಿಯ ಕಲ್ಲಿನ ಕ್ವಾರಿ ದೃಶ್ಯ (ಸಂಗ್ರಹ ಚಿತ್ರ).
ಹಿರೇನಾಗವಲ್ಲಿ ಬಳಿಯ ಕಲ್ಲಿನ ಕ್ವಾರಿ ದೃಶ್ಯ (ಸಂಗ್ರಹ ಚಿತ್ರ).   

ನವದೆಹಲಿ: ‘ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿಯ ಕಲ್ಲುಗಣಿಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಮೃತರ ಕುಟುಂಬಗಳಿಗೆ ಮಾಲೀಕರು ಒಂದು ತಿಂಗಳೊಳಗೆ ಪರಿಹಾರ ನೀಡಲು ವಿಫಲರಾದಲ್ಲಿ, ರಾಜ್ಯ ಸರ್ಕಾರವೇ ಅದನ್ನು ಪಾವತಿಸಬೇಕು’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿದೆ.

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್‌ ನೇತೃತ್ವದ ನ್ಯಾಯಮಂಡಳಿಯ ಪ್ರಧಾನ ಪೀಠವು, ‘ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮೂಲಕ ಪರಿಹಾರವನ್ನು ಪಾವತಿಸಬೇಕು. ತದನಂತರ ಈ ಮೊತ್ತವನ್ನು ಜಿಲ್ಲಾಡಳಿತವು ಕಲ್ಲುಗಣಿಯ ಮಾಲೀಕರಿಂದ ವಸೂಲು ಮಾಡಲು ಕ್ರಮವಹಿಸಬೇಕು’ ಎಂದು ಆದೇಶಿಸಿತು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಈ ಆದೇಶಕ್ಕೆ ಬದ್ಧರಾಗಿ, ತಿಂಗಳೊಳಗೆ ಪರಿಹಾರವನ್ನು ವಿತರಿಸಲು ಕ್ರಮವಹಿಸಬೇಕು. ಮೃತರ ಕುಟುಂಬದ ಅರ್ಹರಿಗೆ ಈ ಪರಿಹಾರ ಮೊತ್ತವು ತಲುಪುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಅಗತ್ಯ ಕಾನೂನು ನೆರವು ಒದಗಿಸಬೇಕು ಎಂದೂ ತಿಳಿಸಿದೆ.

ADVERTISEMENT

ಪರಿಹಾರ ಪಾವತಿ ಕುರಿತಂತೆ ವಸ್ತುಸ್ಥಿತಿ ವರದಿಯನ್ನು ಮೂರು ತಿಂಗಳಲ್ಲಿ ಸಲ್ಲಿಸಬೇಕು ಎಂದು ಎನ್‌ಜಿಟಿಯು, ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದೆ.

ಇದೇ ವರ್ಷದ ಫೆಬ್ರುವರಿ 22ರಂದು ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ 5 ಮಂದಿ ಮೃತಪಟ್ಟಿದ್ದರು. ಸ್ವಪ್ರೇರಿತವಾಗಿ ವಿಚಾರಣೆ ಎತ್ತಿಕೊಂಡಿದ್ದ ನ್ಯಾಯಪೀಠ ವರದಿ ಸಲ್ಲಿಸಲು ಪರಿಣತರ ಸಮಿತಿ ರಚಿಸಿತ್ತು. ‘ಅವಘಡಕ್ಕೆ ಕಲ್ಲುಗಣಿ ಮಾಲೀಕರೇ ಹೊಣೆ. ಸ್ಫೋಟಕಗಳನ್ನು ಅವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿತ್ತು’ ಎಂದು ವರದಿಯಲ್ಲಿ ತಿಳಿಸಿತ್ತು.

ಮೃತರ ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನು ಕಲ್ಲುಗಣಿಯ ಮಾಲೀಕರೇ ನೀಡಬೇಕು ಎಂದೂ ಸಮಿತಿ ಪ್ರತಿಪಾದಿಸಿತ್ತು. ವಾಸ್ತವಿಕ ಸ್ಥಿತಿಯನ್ನು ವರದಿ ಆಧಿಸಿದ್ದು, ಅಂಗೀಕರಿಸಲಾಗಿದೆ ಎಂದು ನ್ಯಾಯಪೀಠವು ತಿಳಿಸಿತ್ತು.

‘ಕಾನೂನುಬಾಹಿರವಾಗಿ ಸ್ಪೋಟಕಗಳ ಸಂಗ್ರಹ ಮತ್ತು ಅವೈಜ್ಞಾನಿಕ ನಿರ್ವಹಣೆಯೇ ಅವಘಡಕ್ಕೆ ಕಾರಣ. ಲೋಪಕ್ಕೆ ಶಿರಡಿ ಸಾಯಿ ಅಗ್ರಿಗೇಟ್ಸ್, ಶ್ರೀ ಭ್ರಮರವಾಸಿನಿ ಎಂ. ಸ್ಯಾಂಡರ್ಸ್ ಎಲ್ಎಲ್‌ಪಿ ಹೊಣೆ’ ಎಂದು ವರದಿಯಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.