ADVERTISEMENT

ಮೇಕೆದಾಟು: ಪರಿಶೀಲನೆಗೆ ಎನ್‌ಜಿಟಿ ಸಮಿತಿ

ಅಕ್ರಮ ಜಲಾಶಯ ನಿರ್ಮಾಣ: ಕರ್ನಾಟಕ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2021, 21:07 IST
Last Updated 25 ಮೇ 2021, 21:07 IST
   

ನವದೆಹಲಿ: ಕರ್ನಾಟಕ ಸರ್ಕಾರವು ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಕ್ರಮವಾಗಿ ಅಣೆಕಟ್ಟೆ ನಿರ್ಮಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಿತಿಯೊಂದನ್ನು ರಚಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಈ ಸಂಬಂಧ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.

ಅರಣ್ಯ, ಪರಿಸರ ಅನುಮತಿ ಪಡೆಯದೆಯೇ ಮೇಕೆದಾಟು ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಪತ್ರಿಕಾ ವರದಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಆರ್‌.ರಾಮಕೃಷ್ಣನ್‌ ಹಾಗೂ ತಜ್ಞ ಸದಸ್ಯ ಕೆ.ಸತ್ಯಗೋಪಾಲ್‌ ಅವರನ್ನು ಒಳಗೊಂಡ ಎನ್‌ಜಿಟಿಯ ದಕ್ಷಿಣ (ಚೆನ್ನೈ)ದ ಪೀಠ, ಜುಲೈ 5ರೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಿದೆ.

ಉದ್ದೇಶಿತ ಯೋಜನಾ ಪ್ರದೇಶದ ಬಳಿ ಇರುವ ಕಾವೇರಿ ವನ್ಯಜೀವಿ ತಾಣ ಹಾಗೂ ಮೇಕೆದಾಟು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಉಲ್ಲಂಘನೆ ಕಂಡುಬಂದಲ್ಲಿ ವಾಸ್ತವ ವರದಿಯನ್ನು ಸಲ್ಲಿಸಬೇಕು ಎಂದು ಸಮಿತಿಗೆ ನಿರ್ದೇಶನ ನೀಡಲಾಗಿದೆ.

ADVERTISEMENT

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಕರ್ನಾಟಕದ ಅರಣ್ಯ ಇಲಾಖೆಯ ಹಿರಿಯ (ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಿಂತ ಉನ್ನತ ಸ್ಥಾನದ) ಅಧಿಕಾರಿಗಳನ್ನು ಈ ಸಮಿತಿ ಒಳಗೊಳ್ಳಲಿದೆ. ಕರ್ನಾಟಕದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯು ನೋಡಲ್ ಅಧಿಕಾರಿಯಾಗಲಿದ್ದು, ಸ್ಥಳ ಪರಿಶೀಲನೆಗೆ ಬರುವ ಸಮಿತಿ ಸದಸ್ಯರಿಗೆ ಎಲ್ಲ ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಪೀಠ ಹೇಳಿದೆ.

ಅನುಮತಿ ಪಡೆಯದೇ ಜಲಾಶಯದ ನಿರ್ಮಾಣಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಅಲ್ಲದೆ, ಉದ್ದೇಶಿತ ಯೋಜನಾ ಪ್ರದೇಶದ ಬಳಿ ಪರಿಕರಗಳನ್ನು ಸಂಗ್ರಹಿಸಲಾಗಿದೆ ಎಂಬ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರದ ಪರಿಸರ, ಅರಣ್ಯ ಮತ್ತು ಜಲಶಕ್ತಿ ಸಚಿವಾಲಯ, ಕೇಂದ್ರದ ಜಲ ಆಯೋಗ, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳಿಗೆ ಈ ಸಂಬಂಧ ನೋಟಿಸ್‌ ಜಾರಿ ಮಾಡಲಾಗಿದೆ.

ಮೇಕೆದಾಟು ಬಳಿ ಜಲಾಶಯ ನಿರ್ಮಾಣಕ್ಕೆ ಮುಂದಾಗಿದ್ದರಿಂದ ಪರಿಸರದ ಕುರಿತ ಪ್ರಶ್ನೆ ಉದ್ಭವಿಸಿದೆ. 2021ರ ಏಪ್ರಿಲ್‌ 15ರಂದು ಪ್ರಕಟವಾಗಿರುವ ಪತ್ರಿಕಾ ವರದಿಗಳಲ್ಲಿನ ಆರೋಪಗಳನ್ನು ಅವಲೋಕಿಸಲಾಗಿದ್ದು, ಈ ಸಂಬಂಧ ನ್ಯಾಯಮಂಡಳಿಯ ಮಧ್ಯಸ್ಥಿಕೆ ವಹಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಹಸಿರು ಪೀಠ ತಿಳಿಸಿದೆ.

ಕಾವೇರಿಯ ಹೆಚ್ಚುವರಿ ನೀರನ್ನು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನತೆಗೆ ಕುಡಿಯಲು ಪೂರೈಸುವ ಹಾಗೂ ವಿದ್ಯುತ್‌ ಉತ್ಪಾದಿಸುವ ಉದ್ದೇಶದಿಂದ ಕರ್ನಾಟಕ ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಿದೆ. ಆದರೆ, ಹೆಚ್ಚುವರಿ ನೀರು ಬಳಸುವ ಕರ್ನಾಟಕದ ಉದ್ದೇಶಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ವೆಲ್ಲಾರು, ಗುಂಡಾರು ಮತ್ತು ವೈಗೈ ನದಿಗಳೊಂದಿಗೆ ಕಾವೇರಿಯನ್ನು ಜೋಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.