ADVERTISEMENT

ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆಗೆ ಎನ್‌ಎಚ್‌ಆರ್‌ಸಿ ಶಿಫಾರಸು

ಪಿಟಿಐ
Published 15 ಜುಲೈ 2021, 14:27 IST
Last Updated 15 ಜುಲೈ 2021, 14:27 IST
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರದಲ್ಲಿ ನಡೆದಿದ್ದ ಹಿಂಸಾಚಾರದ ಸಂಗ್ರಹ ಚಿತ್ರ
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರದಲ್ಲಿ ನಡೆದಿದ್ದ ಹಿಂಸಾಚಾರದ ಸಂಗ್ರಹ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಲದಲ್ಲಿ ಚುನಾವಣೋತ್ತರದಲ್ಲಿ ನಡೆದಿದ್ದ ಹಿಂಸಾಚಾರ, ಅತ್ಯಾಚಾರ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಶಿಫಾರಸು ಮಾಡಿದೆ.

ಎನ್‌ಎಚ್‌ಆರ್‌ಸಿ ನೇಮಕ ಮಾಡಿದ್ದ ಸಮಿತಿಯು ಈ ಕುರಿತ ವರದಿಯನ್ನು ಕಲ್ಕತ್ತ ಹೈಕೋರ್ಟ್‌ಗೆ ಜೂನ್‌ 13ರಂದು ಸಲ್ಲಿಸಿದೆ. ಅಲ್ಲದೆ, ಈ ಪ್ರಕರಣಗಳ ವಿಚಾರಣೆಯನ್ನು ರಾಜ್ಯದ ಹೊರಗಡೆ ನಡೆಸಬೇಕು ಎಂದೂ ಸಲಹೆ ಮಾಡಿದೆ.

ಹೈಕೋರ್ಟ್‌ನ ಪಂಚ ಸದಸ್ಯರ ಪೀಠದ ನಿರ್ದೇಶನದ ಅನುಸಾರ ಎನ್‌ಎಚ್‌ಆರ್‌ಸಿ ಅಧ್ಯಕ್ಷರು ಸಮಿತಿಯನ್ನು ರಚಿಸಿದ್ದರು. ‘ಪಶ್ಚಿಮ ಬಂಗಾಳದಲ್ಲಿ ಈ ನೆಲದ ಕಾನೂನುಗಳಿಗೆ ಬದಲಾಗಿ, ಅಧಿಕಾರದಲ್ಲಿರುವವರ ಕಾನೂನು ಜಾರಿಯಲ್ಲಿದೆ’ ಎಂದು ಸಮಿತಿ ಹೇಳಿದೆ.

ADVERTISEMENT

ಸಮಿತಿಯು ತನ್ನ ವರದಿಯಲ್ಲಿ ಕೊಲೆ, ಅತ್ಯಾಚಾರದಂತಹ ಗಂಭೀರ ಪ್ರಕರಣಗಳನ್ನು ಸಿಬಿಐತನಿಖೆಗೆ ಒಪ್ಪಿಸಬೇಕು. ಇವುಗಳ ವಿಚಾರಣೆಯನ್ನು ರಾಜ್ಯದ ಹೊರಗಡೆ ನಡೆಸಬೇಕು ಎಂದು ಪ್ರಮುಖವಾಗಿ ಸಲಹೆ ಮಾಡಿದೆ.

ಹಿಂಸಾಚಾರದ ಘಟನೆಗಳು ಆಡಳಿತ ಪಕ್ಷದ ಬೆಂಬಲಿಗರು ಪ್ರಮುಖ ವಿರೋಧ ಪಕ್ಷದ ಬೆಂಬಲಿಗರ ಮೇಲೆ ನಡೆಸಿದ ಪ್ರತೀಕಾರದ ಕ್ರಮವಾಗಿದೆ ಎಂದು ಸಮಿತಿಯು ತನ್ನ ಅಭಿಪ್ರಾಯವನ್ನು ದಾಖಲಿಸಿದೆ.

ಚುನಾವಣೆಯ ನಂತರ ನಡೆದಿದ್ದ ಹಿಂಸಾಚಾರ ಘಟನೆಗಳ ತನಿಖೆಗೆ ಕೋರಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.

ರಾಜಕೀಯ ದ್ವೇಷಕ್ಕೆ ಎನ್‌ಎಚ್ಆರ್‌ಸಿ ಬಳಕೆ: ಮಮತಾ ಆರೋಪ:’ಚುನಾವಣೋತ್ತರ ಹಿಂಸಾಚಾರ ಕುರಿತ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ಎನ್‌ಎಚ್‌ಆರ್‌ಸಿ, ಕೋರ್ಟ್‌ಗೆ ಅಗೌರವ ಸೂಚಿಸಿದೆ‘ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಆರೋಪಿಸಿದರು.

ಬಿಜೆಪಿಯ ‘ರಾಜಕೀಯ ದ್ವೇಷ’ವನ್ನು ಎನ್‌ಎಚ್‌ಆರ್‌ಸಿ ಮುಂದುವರಿಸಿದೆ. ರಾಜ್ಯ ಸರ್ಕಾರದ ಅಭಿಪ್ರಾಯಗಳನ್ನು ಪರಿಗಣಿಸದೇ ಎನ್‌ಎಚ್ಆರ್‌ಸಿ ತೀರ್ಮಾನ ಕೈಗೊಂಡಿದೆ ಬಂದಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.

ನಿಷ್ಪಕ್ಷವಾತ ಸಂಸ್ಥೆಗಳನ್ನು ಬಿಜೆಪಿಯು ಈತ ತನ್ನ ದ್ವೇಷ ಸಾಧನೆಗೆ ಬಳಸಿಕೊಳ್ಳುತ್ತಿದೆ. ಎನ್‌ಎಚ್‌ಆರ್‌ಸಿ ಮಾಧ್ಯಮಗಳಿಗೆ ಸೋರಿಕೆ ಮಾಡುವ ಬದಲು ವರದಿಯನ್ನು ಕೋರ್ಟ್‌ಗೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.